janadhvani

Kannada Online News Paper

ವಿವಾದಕ್ಕೆ ತೆರೆ: ಈದ್ಗಾ ಮೈದಾನ ವಖ್ಫ್ ಮಂಡಳಿಯದ್ದು- ಬಿಬಿಎಂಪಿ ಸ್ಪಷ್ಟನೆ

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡುವಂತೆ ಸಂಘಪರಿವಾರ ಸಂಘಟನೆಗಳು ಅನುಮತಿ ಕೋರಿದ್ದ ಬಳಿಕ ತೀವ್ರ ವಿವಾದ ಹುಟ್ಟು ಹಾಕಿಕೊಂಡಿತ್ತು

ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ವಖ್ಫ್ ಬೋರ್ಡ್ ಸ್ವಾಗತ ಮೈದಾನ ಬಿಬಿಎಂಪಿಗೆ ಸೇರಿದ್ದಲ್ಲ, ಅದು ವಕ್ಫ್ ಮಂಡಳಿಯದ್ದು ಎಂದು ಹೇಳುವ ಮೂಲಕ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮೈದಾನದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈದ್ಗಾ ಮೈದಾನ ಬಿಬಿಎಂಪಿ ಸುಪರ್ದಿಯಲ್ಲಿ ಇಲ್ಲ, ಅದು ನಮ್ಮ ಸ್ವತ್ತು ಅಲ್ಲ ಎಂದು ಗಿರಿನಾಥ್ ಹೇಳಿದ್ದಾರೆ.

ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡುವಂತೆ ಸಂಘಪರಿವಾರ ಸಂಘಟನೆಗಳು ಅನುಮತಿ ಕೋರಿದ್ದ ಬಳಿಕ ತೀವ್ರ ವಿವಾದ ಹುಟ್ಟು ಹಾಕಿಕೊಂಡಿತ್ತು. ಆನಂತರ, ಬಿಬಿಎಂಪಿ ಇದು ನಮ್ಮ ಸ್ವತ್ತು ಎಂದೂ ಹೇಳಿತ್ತು. ಆದರೆ, ಇದೀಗ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಸ್ವತ್ತು ನಮ್ಮದಲ್ಲ ಎಂದಿದ್ದಾರೆ.

ಬಿಬಿಎಂಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಚಾಮರಾಜಪೇಟೆ ಮೈದಾನ ವಿವಾದ ಸಂಬಂಧ 1974ನೇ ಸಾಲಿನಲ್ಲಿ ಸಿಟಿ ಸರ್ವೆ ಪ್ರಕಾರ ನಮ್ಮ ಖಾತೆ ಇದೆ ಎಂದು ಉಲ್ಲೇಖವಾಗಿದೆ. ಮೇಲ್ನೋಟಕ್ಕೆ ಮೈದಾನ ಸ್ವಾಮಿಥ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲ. ಆದರೆ, ಖಾತಾ ಪ್ರಕಾರ ಮಾಲಿಕತ್ವ ನಮ್ಮದು ಇದೆ. ಇನ್ನೂ, ವಕ್ಫ್ ಬೋರ್ಡ್ ದಾಖಲೆ ಸಮೇತ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಈ ಹಿಂದೆ ಈದ್ಗಾ ಮೈದಾನ ತನಗೆ ಸೇರಿದ್ದೆಂದು ಬಿಬಿಎಂಪಿ ವಾದಿಸಿತ್ತು. ಆದರೆ ವಕ್ಫ್ ಮಂಡಳಿ ದಾಖಲೆಗಳನ್ನು ಸಲ್ಲಿಸಿತೋ ಆಗಲೇ ಬಿಬಿಎಂಪಿ ಉಲ್ಟಾ ಹೊಡೆದಿದೆ. ತನ್ನಲ್ಲಿರುವ ಎಲ್ಲ ಕಡತಗಳನ್ನು ಹುಡುಕಿದರು ಈದ್ಗಾ ಮೈದಾನ ತನ್ನದೆಂದು ವಾದಿಸಲು ಒಂದೇ ಒಂದು ಸರಿಯಾದ ದಾಖಲೆಯು ಸಿಕ್ಕಿರಲಿಲ್ಲ. ಇದರಿಂದಾಗಿ ವಕ್ಫ್ ಮಂಡಳಿಗೆ ದಾಖಲೆ ಸಲ್ಲಿಸುವಂತೆ ನೊಟೀಸ್ ನೀಡಿತ್ತು. ವಕ್ಫ್ ಮಂಡಳಿ ದಾಖಲೆಯನ್ನು ಬಿಬಿಎಂಪಿಗೆ ನೀಡಿತ್ತು. ದಾಖಲೆಯನ್ನು ಪರಿಶೀಲಿಸಿ ಬಿಬಿಎಂಪಿ ಮೈದಾನ ತನ್ನ ಸುಪರ್ದಿಯಲ್ಲಿಲ್ಲ ಎಂದು ಒಪ್ಪಿಕೊಂಡಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ಬೇಕಾದಲ್ಲಿ ತನ್ನ ಬಳಿಯಲ್ಲಿ ಅರ್ಜಿ ಸಲ್ಲಿಸುವ ಬದಲು ವಕ್ಫ್ ಮಂಡಳಿಗೆ ಅರ್ಜಿ ಸಲ್ಲಿಸಲಿ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ವಖ್ಫ್ ಬೋರ್ಡ್ ಅಧ್ಯಕ್ಷರ ಪ್ರತಿಕ್ರಿಯೆ

ಇತ್ತೀಚೆಗೆ ವಕ್ಫ್ ಬೋರ್ಡ್ ಮಂಡಳಿ ಮೈದಾನಕ್ಕೆ ಸಂಬಂಧಿಸಿದಂತೆ ಮೈಸೂರು ಆಡಳಿತ ಕಾಲದಿಂದಲೂ ಇದ್ದ ದಾಖಲೆಗಳನ್ನು ಬಿಬಿಎಂಪಿಗೆ ಸಲ್ಲಿಕೆ ಮಾಡಿತ್ತು. ಇದನ್ನು ಬಿಬಿಎಂಪಿ ಕಾನೂನು ವಿಭಾಗ ಪರಿಶೀಲನೆ ನಡೆಸಿ, ಈ ಸ್ವತ್ತು ನಮ್ಮದಲ್ಲ ಎನ್ನುವ ಅಭಿಪ್ರಾಯ ಹೇಳಿತ್ತು ಎನ್ನಲಾಗಿದೆ. ಈದ್ಗಾ ಮೈದಾನ ವಿವಾದ ಸಂಬಂಧ ಈಗಾಗಲೇ ನಾವು ಖಾತೆಗಾಗಿ ಬಿಬಿಎಂಪಿಗೆ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಇನ್ನೂ, ಬಿಬಿಎಂಪಿ ಇದು ನಮ್ಮ ಸ್ವತ್ತು ಅಲ್ಲ ಎಂದಿರುವುದು ಸಂತಸ ತಂದಿದೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಯಾವುದೇ ತರದ ತೊಂದರೆ ಆಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ 20 ರಿಸರ್ವ್ ಪೊಲೀಸರನ್ನು ಹಾಗೂ 5 ಸ್ಥಳೀಯ ಪೊಲೀಸರನ್ನು ಮೈದಾನದ ಸುತ್ತಲೂ ಇರಿಸಲಾಗಿದೆ. ಅದರೊಂದಿಗೆ 12 ಸಿಸಿಟಿವಿಗಳನ್ನು ಹಾಕಲಾಗಿದೆ. ಅ. 15ರ ವರೆಗೆ ಈ ಒಂದು ಭದ್ರತೆ ಮುಂದುವರೆಯಲಿದ್ದು, ನಂತರದ ದಿನಗಳಲ್ಲಿ ಆಗುವ ಬೆಳವಣಿಗೆಗಳ ಮೇಲೆ ಈ ಭದ್ರತೆ ಮುಂದುವರೆಸುವುದರ ಕುರಿತು ನಿರ್ಧರಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com