ರಿಯಾದ್: ಉಮ್ರಾ ವೀಸಾದ ಸಿಂಧುತ್ವವನ್ನು ಒಂದು ತಿಂಗಳಿಂದ ಮೂರು ತಿಂಗಳಿಗೆ ವಿಸ್ತರಿಸಲಾಗುವುದು ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವರಾದ ತೌಫಿಕ್ ಅಲ್ ರಬಿಯಾ ಘೋಷಿಸಿದ್ದಾರೆ.
ಉಮ್ರಾ ವೀಸಾದಲ್ಲಿ ದೇಶಕ್ಕೆ ಬರುವವರು ಸೌದಿ ಅರೇಬಿಯಾದಾದ್ಯಂತ ಪ್ರಯಾಣಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಉಮ್ರಾ ವೀಸಾವನ್ನು 24 ಗಂಟೆಗಳ ಒಳಗೆ ಪಡೆಯಬಹುದು ಎಂದು ಅವರು ತಿಳಿಸಿದರು.
ಜೋರ್ಡಾನ್ ರಾಜಧಾನಿ ಅಮ್ಮಾನ್‌ನಲ್ಲಿ ಸೌದಿ ರಾಯಭಾರ ಕಚೇರಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹಜ್ ಮತ್ತು ಉಮ್ರಾ ಸಚಿವರು ಮಾತನಾಡುತ್ತಿದ್ದರು. ಸ್ಮಾರ್ಟ್ ಕಾರ್ಡ್ ಯೋಜನೆಯು ಮಿನಾ ಮತ್ತು ಅರಾಫಾಗೆ ಯಾತ್ರಿಕರ ಪ್ರಯಾಣವನ್ನು ಸುಲಭಗೊಳಿಸುವ ಮತ್ತು ವೇಗಗೊಳಿಸುವ ಗುರಿಯನ್ನು ಹೊಂದಿದೆ. ಹಜ್ ಯಾತ್ರೆಗೆ ಸಿದ್ಧತೆಗಳು ಪೂರ್ಣಗೊಂಡಿವೆ.
ಈ ವರ್ಷ ಸ್ಮಾರ್ಟ್ ಕಾರ್ಡ್‌ಗಳನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು. ಹಜ್ ಯಾತ್ರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ. ಈ ವರ್ಷ ಒಂದು ಲಕ್ಷ ಯಾತ್ರಾರ್ಥಿಗಳು ಹಜ್ ನಿರ್ವಹಿಸಲು ಸಾಧ್ಯವಾಗಲಿದೆ.
ಡಿಜಿಟಲ್ ತಂತ್ರಜ್ಞಾನಗಳು ಹಜ್ ಅನ್ನು ಅನುಕರಣೀಯ ರೀತಿಯಲ್ಲಿ ಆಯೋಜಿಸಲು ಸಹಾಯ ಮಾಡುತ್ತವೆ. ಉಮ್ರಾ ವೀಸಾಗಳನ್ನು ಈಗ ಇ-ಸೇವೆಯ ಮೂಲಕ 24 ಗಂಟೆಗಳ ಒಳಗೆ ನೀಡಲಾಗುತ್ತಿದೆ. ಯಾತ್ರಾರ್ಥಿಗಳು ಇ-ಸೇವೆಯ ಮೂಲಕ ಪವಿತ್ರ ಸ್ಥಳಗಳಲ್ಲಿ ವಸತಿ ಮತ್ತು ಪ್ರಯಾಣವನ್ನು ಮೊದಲೇ ಆಯ್ಕೆ ಮಾಡಬಹುದು. ಈ ಹಿಂದೆ ಉಮ್ರಾ ಯಾತ್ರಾರ್ಥಿಗಳಿಗೆ ಉಮ್ರಾ ಸೇವಾ ಕಂಪನಿಗಳು ಮತ್ತು ಏಜೆನ್ಸಿಗಳ ಮೂಲಕ ವೀಸಾಗಳನ್ನು ನೀಡಲಾಗುತ್ತಿತ್ತು.
ಇದೀಗ ಸೇವಾ ಕಂಪನಿಗಳ ಸೇವೆಗಳನ್ನು ಪಡೆಯದೆ ಇ-ಸೇವೆಯ ಮೂಲಕ ಉಮ್ರಾ ವೀಸಾವನ್ನು ಸುಲಭವಾಗಿ ಪಡೆಯಬಹುದು. ಹಜ್ ಮತ್ತು ಉಮ್ರಾ ಸಚಿವಾಲಯದಿಂದ ಅನುಮೋದಿಸಲ್ಪಟ್ಟ ವಿಶ್ವಾಸಾರ್ಹ ಕಂಪನಿಗಳೊಂದಿಗೆ ಮುಂಚಿತವಾಗಿ ಪ್ರಯಾಣ ಮತ್ತು ವಸತಿ ವ್ಯವಸ್ಥೆಯನ್ನು ಸಿದ್ದ ಪಡಿಸಬಹುದು.