janadhvani

Kannada Online News Paper

ಕಾಸರಗೋಡಿನಲ್ಲಿ ಕೋವಿಡ್ ಹೆಚ್ಚಳ- ದ.ಕ.ಜಿಲ್ಲೆಯಲ್ಲಿ ಕಟ್ಟೆಚ್ಚರ

ಮಂಗಳೂರು,ಜು.31: ನೆರೆಯ ಕಾಸರಗೋಡಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಿಂದ ಕಾಸರಗೋಡಿಗೆ ಸಂಚರಿಸುವ ಸರಕಾರಿ ಹಾಗೂ ಖಾಸಗಿ ಬಸ್‌ಗಳನ್ನು ಆ.1ರಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆ.1ರಿಂದ 10 ದಿನದ ಕಾಲ ಕಾಸರಗೋಡು ಬಸ್ ಸಂಚಾರ ಸ್ಥಗಿತಗೊಳಿಸಲಾಗುತ್ತದೆ, ಕರ್ನಾಟಕ ಪ್ರವೇಶಿಸುವ ಕೇರಳ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಕಡ್ಡಾಯವಾಗಿದ್ದು ಅವರು ಹಾಸ್ಟೆಲ್‍ನಲ್ಲಿ ಒಂದು ವಾರ ಹೋಂ ಕ್ವಾರಂಟೈನ್’ಗೆ ಒಳಪಡಬೇಕಾಗಿದೆ. ಸೋಂಕಿತರಿಗೆ ಕಡ್ಡಾಯವಾಗಿ ಕೋವಿಡ್ ಸೆಂಟರ್‌ನಲ್ಲಿ ದಾಖಲಿಸಬೇಕು, ಅನಗತ್ಯವಾಗಿ ಸೋಂಕಿತರು ಹೊರಗೆ ತಿರುಗಾಡುವುದು ಕಂಡುಬಂದಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಯಮ ಮತ್ತಷ್ಟು ಬಿಗಿಗೊಳಿಸಲಾಗಿದ್ದು,1 ಕುಟುಂಬದಲ್ಲಿ ಇಬ್ಬರು ಸೋಂಕಿತರಿದ್ದರೆ ಮೈಕ್ರೋ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಲಾಗುವುದು, ರಸ್ತೆಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವಂತಹ ಸಾರ್ವಜನಿಕರ ಮೇಲೆ ದಂಡ ವಿಧಿಸಬೇಕು, ಆ.10ರ ತನಕ ಸಭೆ, ಸಮಾರಂಭ ನಡೆಸುವಂತಿಲ್ಲ, ಮದುವೆಗೆ 50 ಜನ ಮಾತ್ರ ಸೀಮಿತ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದಲ್ಲಿ ಕಲ್ಯಾಣ ಮಂಟಪಗಳ ಮಾಲಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತಿಳಿಸಿದರು.

ಕೋವಿಡ್ ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿ ಇರುವ ಬಗ್ಗೆ ಸಂಬಂಧಿಸಿದ ತಹಶೀಲ್ದಾರ್‌ಗಳು ಮತ್ತು ತಾಲೂಕು ವೈದ್ಯಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳುವಂತಹ ಸ್ಥಳಗಳಲ್ಲಿ ಜನಸಂದಣಿ ಕಂಡುಬರುತ್ತಿದ್ದೂ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇ.60 ಆನ್‌ಲೈನ್ ನೋಂದಣಿ ಮತ್ತು ಶೇ.40 ನೇರವಾಗಿ ಹಾಗೂ 18 ವರ್ಷ ಮೇಲ್ಟಟ್ಟವರಿಗೆ ಶೇ.80 ಆನ್‌ಲೈನ್ ನೋಂದಣಿ ಮತ್ತು ಶೇ.20 ನೇರವಾಗಿ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದರು

error: Content is protected !! Not allowed copy content from janadhvani.com