ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸುರೇಶ್‌ಕುಮಾರ್ ಸಭೆ ನಡೆಸಿದ್ದು ಸಭೆಯಲ್ಲಿ ಶಾಲೆ ಆರಂಭ ಮಾಡುವಂತೆ ಜಿಲ್ಲಾ ನಿರ್ದೇಶಕರು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಕಾತುರರಾಗಿದ್ದಾರೆ. ಕಳೆದ 15 ತಿಂಗಳಿನಿಂದ ಮಕ್ಕಳು ಶಾಲೆ ಮುಖ ನೋಡಿಲ್ಲ. ಶಾಲೆ ಆರಂಭಕ್ಕೆ ಯೋಜನೆ ರೂಪಿಸುವಂತೆ ಸುರೇಶ್‌ಕುಮಾರ್‌ಗೆ ಜಿಲ್ಲಾ ನಿರ್ದೇಶಕರು ಮನವಿ ಮಾಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ಶಾಲೆ ಆರಂಭ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಜಿಲ್ಲಾ ನಿರ್ದೇಶಕರು, ಉಪ ನಿರ್ದೇಶಕರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಆಯುಕ್ತರು ಸೇರಿ ಹಲವರು ಭಾಗಿಯಾಗಿದ್ದಾರೆ.
ಶಾಲೆಗಳನ್ನ ಓಪನ್ ಮಾಡಲು ಏನೆಲ್ಲ ಮಾರ್ಗಸೂಚಿ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ..
- ಮಕ್ಕಳಿಗೆ ಮಾಸ್ಕ್ ಕಡ್ಡಾಯ ಮಾಡುವುದು.
- ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗೆ ಲಸಿಕೆ ಕಡ್ಡಾಯ ಮಾಡುವುದು.
- ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡುವುದು.
- ಶಾಲಾ ಆವರಣಕ್ಕೆ ಅನ್ಯರಿಗೆ ನಿರ್ಭಂಧಿಸಿ, ಶಾಲೆಯನ್ನ ಸ್ವಚ್ಛವಾಗಿಟ್ಟುಕೊಳ್ಳುವುದು.
- ಅರೋಗ್ಯವಂತ ಮಕ್ಕಳಿಗೆ ಮಾತ್ರ ಶಾಲಾ ಪ್ರವೇಶಕ್ಕೆ ಅವಕಾಶ ನೀಡುವುದು.
- ವಾರಕ್ಕೊಮ್ಮೆ ಸ್ಥಳೀಯ ವೈದ್ಯರಿಂದ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸುವುದು.
- ಸಾಮಾಜಿಕ ಅಂತರ ಹಾಗೂ ಕೊವಿಡ್ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವುದು.
- ಶಾಲಾ ಅವರಣದಲ್ಲಿ ಸುತ್ತಾಮುತ್ತಾ ತಿಂಡಿ, ಆಹಾರ ಮಾರಟ ನಿಷೇಧಿಸಿವುದು.
- ಪೋಷಕರ ಸಮತಿಯೊಂದಿಗೆ ಮಕ್ಕಳನ್ನ ಶಾಲೆಗೆ ಕರೆತರುವುದು.
- ಮಕ್ಕಳಿಗೆ ಸರ್ಕಾರದಿಂದ ಪೌಷ್ಟಿಕಾಂಶ ಆಹಾರ ನೀಡುವುದು.
ಆಗಸ್ಟ್ನಿಂದ ಕಾಲೇಜುಗಳು ಆರಂಭ ಸಾಧ್ಯತೆ
ಕೊರೊನಾ ಆರ್ಭಟ ಕಡಿಮೆಯಾಗುತ್ತಿರುವ ಹಿನ್ನೆಲೆ ಮೊದಲ ಹಂತದಲ್ಲಿ ಕಾಲೇಜುಗಳನ್ನು ತೆರೆಯಲು ಡಾ.ದೇವಿಶೆಟ್ಟಿ ಸಲಹೆ ನೀಡಿದ್ದಾರೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಕಾಲೇಜುಗಳನ್ನು ತೆರೆಯಲು ಸಹಮತ ಸೂಚಿಸಿದ್ದು, ಕಾಲೇಜುಗಳ ಆರಂಭಕ್ಕೆ ಸರ್ಕಾರದಿಂದ ಸಿದ್ಧತೆ ನಡೆಯುತ್ತಿದೆ.
ಎರಡನೇ ಹಂತದಲ್ಲಿ 7-10ನೇ ತರಗತಿ, ಮೂರನೇ ಹಂತದಲ್ಲಿ 5-6ನೇ ತರಗತಿ ಆರಂಭಿಸುವಂತೆ ಸಲಹೆ ನೀಡಿದೆ. ಹೀಗಾಗಿ ಹಂತ ಹಂತವಾಗಿ ಶಾಲಾ-ಕಾಲೇಜುಗಳು ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮರಳಿ ಕಾಲೇಜಿಗೆ ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳನ್ನ ಕಾಲೇಜಿಗೆ ತರಲು ಉನ್ನತ ಶಿಕ್ಷಣ ಇಲಾಖೆ ಬೇಕಾದ ತಯಾರಿ ನಡೆಸುತ್ತಿದೆ.