janadhvani

Kannada Online News Paper

ದ.ಕ.ಜಿಲ್ಲೆಯಲ್ಲಿ ಮುಂದಿನ ತಿಂಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸಿಟಿ ಬಸ್‌ ಸಂಚಾರ ಜುಲೈ 1ರಿಂದ ಸೀಮಿತ ಸಂಖ್ಯೆಯಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ. ಗುರುವಾರ ಮೂಡುಬಿದಿರೆಯಲ್ಲಿ ನಡೆದ ಬಸ್‌ ಮಾಲಕರ ಸಂಘದ ಸಭೆಯಲ್ಲಿ ಇದಕ್ಕೆ ಬಹುತೇಕ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ.

ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಮತ್ತು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು ಮಾತನಾಡಿ, ಜು. 1ರಿಂದ ಖಾಸಗಿ ಬಸ್‌ಗಳು ಸೇರಿದಂತೆ ಮಂಗಳೂರು ನಗರದಲ್ಲಿ ಸಿಟಿ ಬಸ್‌ಗಳು ಸೀಮಿತ ಸಂಖ್ಯೆಯಲ್ಲಿ ಕಾರ್ಯಾಚರಣೆ ಆರಂಭವಾಗುತ್ತದೆ. ತೆರಿಗೆ ವಿನಾಯಿತಿ ಸಹಿತ ಕೆಲವೊಂದು ಬೇಡಿಕೆಗಳನ್ನು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಕೆಗೆ ಮತ್ತೂಮ್ಮೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ತಿಂಗಳಲ್ಲಿ ಕೇವಲ 7 ದಿನ ಬಸ್ ಓಡಿಸಿದರೆ, 1 ತಿಂಗಳ ತೆರಿಗೆ ಕಟ್ಟಬೇಕು. ಇದು ಕಷ್ಟ ಸಾಧ್ಯ. ಈಗಿನ ಡೀಸೆಲ್ ಬೆಲೆಯಲ್ಲಿ ಶೇ 50 ರಷ್ಟು ಪ್ರಯಾಣಿಕರನ್ನು ಕರೆದೊಯ್ಯುವುದು ನಷ್ಟ ಉಂಟಾಗಲಿದೆ. ಅಲ್ಲದೇ ನಗರದಾದ್ಯಂತ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಲಾಗಿದೆ. 2 ತಿಂಗಳಿನಿಂದ ನಿಂತಿದ್ದ ಬಸ್‌ಗಳನ್ನು ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಿ ದುರಸ್ತಿ ಮಾಡಿಸಬೇಕಿದೆ ಎಂದು ಬಸ್‌ ಮಾಲೀಕರು ತಿಳಿಸಿದ್ದಾರೆ. ಆದಾಗ್ಯೂ ಪರಿಸ್ಥಿತಿಯನ್ನು ಗಮನಿಸಿ ಜುಲೈ 1 ರಿಂದ ಸಿಟಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸರಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲಿಸಲು ಸಾಧ್ಯವಿಲ್ಲ. ಬಸ್ಸಲ್ಲಿರುವ ಸೀಟಿನ ಅರ್ಧದಷ್ಟು ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ನಮಗೆ ಯಾವುದೇ ಆದಾಯ ಲಭಿಸದು. ಬಸ್ ಸಾರಿಗೆ ಉದ್ಯಮದ ಭವಿಷ್ಯದ ಹಿತದೃಷ್ಟಿಯಿಂದ ಜುಲೈ 1ರಿಂದ ಬಸ್ ಸಂಚಾರ ಆರಂಭಿಸಲು ಮುಂದಾಗಿದ್ದೇವೆ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದ ಲಾಕ್ ಡೌನ್ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದ್ದು, ಶೇಕಡ 50 ರಷ್ಟು ಪ್ರಯಾಣಿಕರು ಬಸ್ ಅಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಬಸ್ ರಸ್ತೆಗಿಳಿದಿಲ್ಲ.

error: Content is protected !! Not allowed copy content from janadhvani.com