janadhvani

Kannada Online News Paper

ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ: ಜೂ.7ರ ನಂತರ ನಿರ್ಧಾರ- ಸಿ.ಎಂ

ಬೆಂಗಳೂರು,ಮೇ.30: ಕರ್ನಾಟಕದಲ್ಲಿ ಈಗಾಗಲೇ ಜೂನ್ 7ರವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಸುಮಾರು 1 ತಿಂಗಳಿಂದ ರಾಜ್ಯದಲ್ಲಿ ಲಾಕ್ಡೌನ್ ಚಾಲ್ತಿಯಲ್ಲಿದ್ದು, ಈ ಲಾಕ್ಡೌನ್ ಅನ್ನು ಮುಂದುವರೆಸುವ ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿದ್ದು, ಲಾಕ್ಡೌನ್ ವಿಸ್ತರಣೆ ಬಗ್ಗೆ ಜೂನ್ 5 ಅಥವಾ 6ರಂದು ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಜೂನ್ 7ರ ಬಳಿಕ ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಣೆ ವಿಚಾರವಾಗಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೂನ್ 5, 6ರ ವೇಳೆಗೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಲಾಗುತ್ತದೆ. ತಜ್ಞರ ಜತೆ, ಸಚಿವರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಇನ್ನೂ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಜಾಸ್ತಿ ಇದೆ. ಲಾಕ್ಡೌನ್ ವಿಸ್ತರಣೆ ಮಾಡಿ ಅಂತ ತಜ್ಞರು ಸದ್ಯ ಯಾವುದೇ ವರದಿ ಕೊಟ್ಟಿಲ್ಲ. ಲಾಕ್ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತಗೊಂಡಿಲ್ಲ. ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಸೂಚಿಸಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಜೂನ್ 7ರ ಬಳಿಕ ಲಾಕ್ ಡೌನ್ ವಿಸ್ತರಣೆ ಮಾಡೋ ಬಗ್ಗೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ತಜ್ಞರು, ಕೋವಿಡ್ ನಿರ್ವಹಣೆಯ ತಂಡಗಳ ಜೊತೆಗೆ ಸಭೆ ನಡೆಸಿ ಸಿಎಂ ಯಡಿಯೂರಪ್ಪ ಅಂತಿಮ ನಿರ್ಧಾರ ಮಾಡಲಿದ್ದಾರೆ. ಕೇಂದ್ರ ಗೃಹ ಇಲಾಖೆ ಕೂಡ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿ ಅಂತ ಸಲಹೆ ಕೊಟ್ಟಿದೆ. ಲಾಕ್ ಡೌನ್ ವಿಸ್ತರಣೆ ಮಾಡೋದು ಜನರ ಮೇಲೆ ನಿಂತಿದೆ. ಕೇಂದ್ರದ ಮಾರ್ಗಸೂಚಿ, ಮತ್ತು ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್ ಡೌನ್ ವಿಸ್ತರಣೆ ಬಗ್ಗೆ ಸಿಎಂ ತೀರ್ಮಾನ ಮಾಡಲಿದ್ದಾರೆ.

ಇನ್ನೊಂದೆಡೆ, ಕರ್ನಾಟಕದಲ್ಲಿ ಕೊರೊನಾ‌ ಕೇಸ್ ಕಡಿಮೆಯಾಗುತ್ತಿದ್ದಂತೆ ಮೈ ಮರೆತ ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಚಿಕನ್, ಮಟನ್, ಮೀನು ತರಕಾರಿ ಹಾಗೂ ದಿನಸಿ ಖರೀದಿ ಜೋರಾಗಿದ್ದು, ಒಬ್ಬರ ಮೇಲೋಬ್ಬರು ಅಂಟಿಕೊಂಡೇ ತರಕಾರಿ ಖರೀದಿ ಮಾಡುತ್ತಿದ್ದಾರೆ. ಲಾಕ್ ಡೌನ್ ಟಫ್ ರೂಲ್ಸ್ ಜಾರಿಯಲ್ಲಿದ್ದರೂ ಶಿವಾಜಿನಗರದಲ್ಲಿ ಡೋಂಟ್ ಕೇರ್ ಎನ್ನಲಾಗುತ್ತಿದೆ. ಬೆಳ್ಳಂ ಬೆಳಗ್ಗೆಯೇ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ‌ ಜನರ ಓಡಾಟ ಹೆಚ್ಚಾಗಿದೆ. ಚಿಕನ್ ಸ್ಟಾಲ್ , ತರಕಾರಿ ಮಾರ್ಕೆಟ್ ಹಾಗೂ ಟೀ ಸ್ಟಾಲ್ ಗಳ ಮುಂದೆ ಜನರು ಮುಗಿಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ಕೊಂಚ ಕಡಿಮೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಲಾಕ್ ಡೌನ್ ವೇಳೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನಿನ್ನೆ 1,239 ವಾಹನ ಜಪ್ತಿ ಮಾಡಿದ ಪೊಲೀಸರು ಇಂದು ಕೂಡ ಜಪ್ತಿ ಕಾರ್ಯಚಾರಣೆ ನಡೆಸಿದ್ದಾರೆ. ನಿನ್ನೆ 1044 ದ್ವಿಚಕ್ರ ವಾಹನಗಳು, 82 ಆಟೋಗಳು, 113 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಲಾಗಿದೆ. NDMA ಅಡಿಯಲ್ಲಿ 43 ಪ್ರಕರಣ ದಾಖಲು ಮಾಡಲಾಗಿದೆ.

ಸದ್ಯಕ್ಕೆ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಅನುಮತಿ ನೀಡಿರುವ ಕ್ಷೇತ್ರಗಳ ನೌಕರರು, ವ್ಯಾಕ್ಸಿನ್ ಪಡೆಯುವವರು, ತುರ್ತು ಕಾರಣಗಳಿರುವವರು ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ. ಜೂನ್ 7ರವರೆಗೆ ಬಸ್ ಸಂಚಾರ, ಮೆಟ್ರೋ ಸಂಚಾರ ಸಂಪೂರ್ಣ ಬಂದ್ ಇರಲಿದೆ. ಮಾಲ್, ಚಿತ್ರಮಂದಿರಗಳು, ಪಾರ್ಕ್ಗಳು, ಈಜುಕೊಳಗಳನ್ನು ತೆರೆಯುವಂತಿಲ್ಲ. ಧಾರ್ಮಿಕ ಕಾರ್ಯಗಳಾದ ಜಾತ್ರೆ, ಮಹೋತ್ಸವಗಳು, ದೇವರ ಉತ್ಸವಗಳು, ದೇವಸ್ಥಾನಗಳು, ಧಾರ್ಮಿಕ ಸ್ಥಳಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ.

error: Content is protected !! Not allowed copy content from janadhvani.com