janadhvani

Kannada Online News Paper

ಕೇರಳದಲ್ಲಿ ಕೊರೋನಾ ಹೆಚ್ಚಳ- ಕಟ್ಟು ನಿಟ್ಟಿನ ಕ್ರಮಕ್ಕೆ ದ.ಕ.ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಕೇರಳದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಜಿಲ್ಲೆಗೆ ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಸೂಕ್ತ ತಪಾಸಣೆಗೊಳಪಡಿಸಿ ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಸೋಮವಾರ ಪೊಲೀಸ್ ಕಮೀಷನರ್, ಕಂದಾಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದ ಅವರು, ಕೇರಳ- ಕರ್ನಾಟಕ ನಡುವಿನ ಜನಸಂಚಾರಕ್ಕೆ ತೊಂದರೆಯಾಗದಂತೆ, ಕೋವಿಡ್ ಅನ್‍ಲಾಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸದೇ ಯಾವ ರೀತಿ ತಪಾಸಣೆ ನಡೆಸಬೇಕು, ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.

ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸುವ ಕುರಿತಂತೆ ಪೊಲೀಸ್, ಕಂದಾಯ ಹಾಗೂ ಮಹಾನಗರ ಪಾಲಿಕೆಯಿಂದ ಆರೋಗ್ಯ ಇಲಾಖೆಯಲ್ಲಿ ತಂಡಗಳನ್ನು ರಚಿಸಿ ಸಂಸ್ಥೆಗಳಿಗೆ ಭೇಟಿ ನೀಡಿ ಉಲ್ಲಂಘನೆ ಕಂಡು ಬಂದರೆ ದಂಡ ಹಾಕುವುದು, ಪರವಾನಿಗೆ ರದ್ದುಪಡಿಸುವ ಕುರಿತಂತೆಯೂ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ದಕ ಜಿಲ್ಲೆಯನ್ನು ಪ್ರವೇಶಿಸುವ ಕೆಲವೊಂದು ಪ್ರಮುಖ ಗಡಿ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ರ‍್ಯಾಟ್ ಟೆಸ್ಟಿಂಗ್ ಮಾಡಿಕೊಂಡು ಅವರ ಮಾಹಿತಿಗಳನ್ನು ಪಡೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ನರ್ಸಿಂಗ್, ಎಂಜಿನಿಯರಿಂಗ್, ಪದವಿ ಕಾಲೇಜುಗಳಲ್ಲಿ ಕಾಸರಗೋಡು ಸೇರಿ ಕೇರಳದ ವಿದ್ಯಾರ್ಥಿಗಳು ಇರುವಲ್ಲಿ ತಪಾಸಣೆಗೊಳಪಡಿಸಲು ನಿರ್ಧರಿಸಲಾಗುವುದು.

ಬಸ್‌ನಲ್ಲಿ ದಿನನಿತ್ಯ ಕೇರಳದಿಂದ ಜಿಲ್ಲೆಗೆ ಆಗಮಿಸುವವರಿಗೆ ಕನಿಷ್ಠ 15 ದಿನಗಳೊಮ್ಮೆ ತಪಾಸಣೆ ನಡೆಸಲಾಗುವುದು. ಪ್ರಾಯೋಗಿಕವಾಗಿ ಈ ಕಾರ್ಯದಲ್ಲಿ ಸಾಕಷ್ಟು ತೊಂದರೆ ಇದೆ. ಹಾಗಾಗಿ ಸಂಚಾರ ನಿರ್ಬಂಧಿಸದೆ ಕೊರೊನಾ ನಿಯಂತ್ರಣ ಸವಾಲಾಗಿದೆ. ಅದನ್ನು ಜಿಲ್ಲಾಡಳಿತದಿಂದ ನಿರ್ವಹಿಸಿ, ದಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.

ಲಾಕ್‍ಡೌನ್ ಸಂದರ್ಭದಲ್ಲಿ 1500ಕ್ಕಿಂತ ಹೆಚ್ಚು ಜನರು ದಿನನಿತ್ಯದ ಪಾಸ್ ತೆಗೆದುಕೊಂಡಿದ್ದರು. ಅದರಲ್ಲಿ 500ಕ್ಕಿಂತ ಹೆಚ್ಚು ಜನರಿಗೆ ಒಬ್ಬೊಬ್ಬ ಅಧಿಕಾರಿ ನೇಮಿಸಿ, ಅವರು ಎಲ್ಲಿ ಕೆಲಸ ಮಾಡುತ್ತಾರೆ ಅವರ ಸುತ್ತಮುತ್ತ ಕೆಲಸ ಮಾಡುವವರಿಗೂ ತಪಾಸಣೆ ಮಾಡುತ್ತೇವೆ. ಜಿಲ್ಲೆಯಲ್ಲಿ 6000ಕ್ಕೂ ಅಧಿಕ ವಿದ್ಯಾರ್ಥಿಗಳು ಕೇರಳ ರಾಜ್ಯದವರಾಗಿದ್ದು, ಅವರನ್ನು ಕಡ್ಡಾಯವಾಗಿ ಮಿಷನ್ ಮೋಡ್‍ನಲ್ಲಿ ತಪಾಸಣೆಗೊಳಿಸಲಾಗುವುದು. ವಿದ್ಯಾರ್ಥಿಗಳು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಬರುವಾಗ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಲು ಸೂಚಿಸಲಾಗುವುದು ಎಂದು ಹೇಳಿದರು.

error: Content is protected !! Not allowed copy content from janadhvani.com