ನವದೆಹಲಿ,ಫೆ.6: ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಕರೆ ನೀಡಿದ್ದ ಚಕ್ಕಾ ಜಾಮ್ ಹೋರಾಟ ಶಾಂತಯುತವಾಗಿ ಮತ್ತು ಯಶಸ್ವಿಯಾಗಿ ನಡೆದಿದೆ. ಸರ್ಕಾರ ಈ ಮೂರು ಕಾನೂನನ್ನು ರದ್ದು ಗೊಳಿಸದಿದ್ದರೆ, ಮುಂದೆಯೂ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ರೈತರು ತಿಳಿಸಿದ್ದಾರೆ.
ದೆಹಲಿ ಗಡಿಗಳಲ್ಲಿ ಕಳೆದ 71 ದಿನಗಳಿಂದ ಕೇಂದ್ರದ ಮೂರು ನೂತನ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಹೆದ್ದಾರಿ ಬಂದ್ ಕರೆಗೆ ಈ ರೈತರು ಕರೆ ನೀಡಿದ್ದರು. ಇದೇ ವೇಳೆ ಉತ್ತರ ಪ್ರದೇಶ, ಉತ್ತರಾ ಖಂಡ್, ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶಗಳನ್ನು ಬಿಟ್ಟು ಬೇರೆಡೆ ಚಕ್ಕಾ ಜಾಮ್ ಯಶಸ್ವಿಯಾಗಿ ನಡೆಯಿತು. ಕಚೇರಿಗೆ ಹೋಗುವವರು ಬರುವವರಿಗೆ ತೊಂದರೆ ಆಗದಂತೆ ಮಧ್ಯಾಹ್ನ 12ರಿಂದ 3ರವರೆಗೆ ಮಾತ್ರ ಈ ಹೆದ್ದಾರಿ ಬಂದ್ಗೆ ಕರೆ ನೀಡಲಾಗಿತ್ತು.
ಈ ಹೆದ್ದಾರಿ ಬಂದ್ ವೇಳೆ ಸಿಲುಕಿದ ನಾಗರಿಕರಿಗೆ ಅಲ್ಲಿಯೇ ನೀರು ಮತ್ತು ಆಹಾರ ಪೂರೈಸುವ ಕೆಲಸ ಮಾಡಲಾಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ಈ ಸಮಸ್ಯೆ ಸೃಷ್ಟಿಗೆ ಕೇಂದ್ರ ಸರ್ಕಾರವೇ ಹೊಣೆ ಎಂಬುದನ್ನು ಟ್ರಾಫಿಕ್ನಲ್ಲಿ ಸಿಲುಕಿದ ಮಂದಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಕೂಡ ನಡೆಯಿತು.
ಪ್ರತಿಭಟನೆ ಕೈ ಬಿಡುವಂತೆ ರೈತ ಸಂಘಟನೆಗಳಿಗೆ ಮನವಿ ಮಾಡಿರುವ ಸರ್ಕಾರ ಈ ಸಂಬಂಧ ರೈತ ಮುಖಂಡರೊಂದಿಗೆ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ, ರೈತರು ಕೃಷಿ ಕಾನೂನನ್ನು ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದು, ಸರ್ಕಾರ ಕೂಡ ಕಾನೂನು ರದ್ದು ಮಾಡುವುದಿಲ್ಲ ಎಂದು ಹಠ ಹಿಡಿದಿದೆ. ಪರಿಣಾಮ ಅಷ್ಟು ಸುತ್ತಿನ ಮಾತುಕತೆ ವಿಫಲವಾಗಿದೆ.
ಈ ಕುರಿತು ಸಂದೇಶ ರವಾನಿಸಿರುವ ರೈತ ಸಂಘಟನೆಗಳು ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ತಾವು ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ರೈತರ ಹೋರಾಟ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ಈಗ ರೈತರ ಜೊತೆ ಔಪಚಾರಿಕ ಚರ್ಚೆ ನಡೆಸುವ ಪ್ರಯತ್ನ ಮಾಡುತ್ತಿದೆ. ಆದರೆ, ರೈತ ಸಂಘಟನೆಗಳನ್ನು ಮುನ್ನಡೆಸುತ್ತಿರುವ ಸಂಯುಕ್ತ್ ಕಿಸಾನ್ ಮೋರ್ಚಾ ಕೇಂದ್ರ ಸರ್ಕಾರ ಮತ್ತು ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ ಕೇಂದ್ರ ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದಲ್ಲದೆ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬುದನ್ನು ಬಿಟ್ಡು ರೈತರು ಕೇಂದ್ರ ಸರ್ಕಾರದಿಂದ ಮತ್ತೇ ಇನ್ನೇನನ್ನೂ ನಿರೀಕ್ಷೆ ಮಾಡುವುದಿಲ್ಲ ಎಂಬುದಾಗಿಯೂ ಸಂಯುಕ್ತ್ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.