ಬೆಂಗಳೂರು,ಫೆ.5: ಬಾಲ್ಯ ವಿವಾಹ, ಬಲವಂತದ ಮದುವೆಗಳನ್ನು ತಪ್ಪಿಸಲು ಪ್ರತಿಯೊಂದು ಮದುವೆಯನ್ನು ಕಡ್ಡಾಯವಾಗಿ ನೋಂದಣಿ ಮಾಡುವ ಬೇಡಿಕೆಯ ಬಗ್ಗೆ ಪರಿಶೀಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.
ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಶಾಸಕ ಕೆ.ಎ.ತಿಪ್ಪೇಸ್ವಾಮಿ ಅವರು, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಗಳಲ್ಲಿರುವ ವಿವಾಹ ಕಾಯ್ದೆಯನ್ನು ತಿದ್ದುಪಡಿ ಮಾಡಿ ಪ್ರತಿಯೊಂದು ಮದುವೆಯನ್ನು ನೋಂದಣಿ ಮಾಡಿಸಬೇಕು. ಆಗ ಬಾಲ್ಯವಿವಾಹ ಮತ್ತು ಬಲವಂತದ ಮದುವೆಗಳು ನಿಲ್ಲುತ್ತವೆ ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಶಶಿಕಲಾ ಅವರು, ಇದು ಉತ್ತಮವಾದ ಸಲಹೆ, ಇದನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಮತ್ತು ಸದಸ್ಯರ ಜತೆ ಚರ್ಚೆ ಮಾಡುತ್ತೇನೆ ಎಂದರು. ರಾಜ್ಯದಲ್ಲಿ 2017-18ರಲ್ಲಿ 202, 2018-19ರಲ್ಲಿ 119, 2019-20ರಲ್ಲಿ 156 ಬಾಲ್ಯ ವಿವಾಹಗಳು ನಡೆದಿವೆ. ಕಳೆದ ವರ್ಷ ರಾಮನಗರದಲ್ಲಿ 31, ಮಂಡ್ಯದಲ್ಲಿ 29, ಬೆಳಗಾವಿ, ಕಲಬುರಗಿಯಲ್ಲಿ 12, ಶಿವಮೊಗ್ಗ-ಚಿಕ್ಕಬಳ್ಳಾಪುರದಲ್ಲಿ ತಲಾ 10, ಮೈಸೂರಿನಲ್ಲಿ 7, ಕೊಪ್ಪಳ, ಬಾಗಲಕೋಟೆ, ಚಿಕ್ಕಮಗಳೂರಿನಲ್ಲಿ ತಲಾ 5, ತುಮಕೂರು, ದಕ್ಷಿಣ ಕನ್ನಡದಲ್ಲಿ ತಲಾ 4, ಬೆಂಗಳೂರು ನಗರ, ಚಾಮರಾಜನಗರ, ರಾಯಚೂರಿನಲ್ಲಿ ತಲಾ 3, ದಾವಣಗೆರೆಯಲ್ಲಿ 2, ಗದಗ, ಹಾವೇರಿ, ಕೊಡಗು, ಉಡುಪಿಯಲ್ಲಿ ತಲಾ ಒಂದು ಬಾಲ್ಯವಿವಾಹಗಳು ನಡೆದಿವೆ. ರಾಜ್ಯದ ವಿವಿಧ ಇಲಾಖೆಗಳ 58,400 ಅಧಿಕಾರಿಗಳು ಬಾಲ್ಯ ವಿವಾಹ ತಡೆ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.