ನವದೆಹಲಿ, ಫೆ.02: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಯ ವಿರುದ್ಧ ದೇಶದ ರೈತರ ಕಳೆದ ಎರಡು ತಿಂಗಳಿನಿಂದ ಸತತ ಹೋರಾಟ ನಡೆಸುತ್ತಿದ್ದಾರೆ. ಇನ್ನು ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿಯ ಹೊರವಲಯದಲ್ಲಿರುವ ಸಿಂಘು ಗಡಿಯಲ್ಲಿ ಹೋರಾಟ ನಿರತರಾಗಿದ್ದಾರೆ.
ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶ ಮಾಡಿದ್ದ ರೈತರು ಜನವರಿ.30 ರಂದು ಉಪವಾಸ ಸತ್ಯಾಗ್ರಹವನ್ನು ಆಚರಿಸಿದ್ದರು. ಇದಲ್ಲದೆ ಗಣರಾಜ್ಯೋತ್ಸವದ ಗಲಭೆ ಬೆನ್ನಿಗೆ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದಿಂದ ದೆಹಲಿಗೆ ಆಗಮಿಸುತ್ತಿರುವ ರೈತರ ಸಂಖ್ಯೆ ದಿನಿದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.
ಹೀಗಾಗಿ ಹೆಚ್ಚಿನ ರೈತರು ಪ್ರತಿಭಟನೆಗೆ ಬಂದು ಸೇರದಂತೆ ತಡೆಯಲು ಕೇಂದ್ರ ಸರ್ಕಾರ ರಸ್ತೆಗಳನ್ನು ಅಗೆದು, ಚೂಪಾದ ಮೊಳೆಗಳನ್ನು ನೆಟ್ಟಿ, ದೊಡ್ಡ ದೊಡ್ಡ ಗೋಡೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್‌ಗಳನ್ನು ಹಾಕುವ ಕೆಲಸಕ್ಕೆ ಮುಂದಾಗಿದೆ.ಇದರ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ಇಂದು ಟ್ವೀಟ್ ಮಾಡುವ ಮೂಲಕ ಕೇಂದ್ರಕ್ಕೆ ಕಿವಿಮಾತು ಹೇಳಿರುವ ರಾಹುಲ್ ಗಾಂಧಿ, “ಭಾರತ ಸರ್ಕಾರ ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ” ಎಂದು ಮಾರ್ಮಿಕವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಶಾಂತಿಯುತ ಪ್ರತಿಭಟನೆಯೋ ಅಥವಾ ಯುದ್ಧವೋ ? ರೈತರ ಧ್ವನಿಯನ್ನು ತಡೆಗಟ್ಟಲು ಈ ರೀತಿ ಮಾಡುವುದಕ್ಕೆ ಯಾವುದೇ ಸಮರ್ಥನೆಯಿಲ್ಲ. ನಿಮ್ಮ ಬ್ಯಾರಿಕೇಡ್‌ಗಳು, ಮುಳ್ಳುತಂತಿಗಳಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವು ಶಾಂತಿಯುತವಾಗಿದ್ದೆವು, ಶಾಂತಿಯುತವಾಗಿದ್ದೇವೆ ಮತ್ತು ಶಾಂತಿಯುತವಾಗಿರುತ್ತೇವೆ. ನಿಮ್ಮ ಗೂಂಡಾಗಳಿಂದ ನಮ್ಮನ್ನು ಪ್ರಚೋದಿಸಬೇಡಿ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಈ ಕುರಿತು ಪ್ರಿಯಾಂಕಾ ಗಾಂಧಿ ಕೂಡ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ‘ಪ್ರಧಾನ್‌ಮಂತ್ರಿ ಜಿ, ಅಪನೆ ಕಿಸಾನೊ ಸೆ ಹಿಂ ಯುದ್ಧ್?’ (ಪ್ರಧಾನಮಂತ್ರಿಯವರೇ, ನಮ್ಮ ರೈತರೊಂದಿಗೇ ಯುದ್ಧವಾ?) ಎಂದು ಕುಟುಕಿದ್ದಾರೆ. ಅವರು ಗೋಡೆ, ಕಬ್ಬಿಣ ತಂತಿ ಅಳವಡಿಸುವ ವಿಡಿಯೋ ಶೇರ್ ಮಾಡಿದ್ದಾರೆ.
ದೆಹಲಿಯ ಸಿಂಘು, ಟಿಕ್ರಿ ಹಾಗೂ ಗಾಜಿಪುರ್ ಗಡಿಗಳಲ್ಲಿ ರೈತರ ಪ್ರತಿಭಟೆನೆಗಳು ತೀವ್ರವಾಗಿ ಹೆಚ್ಚುತ್ತಿದೆ. ರೈತರು ಅಲ್ಲಿಗೆ ಭಾರಿ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸುವುದು ಸೇರಿದಂತೆ, ಹಲವು ಹಂತಗಳ ಬ್ಯಾರಿಕೇಡ್ ಹಾಕಲು ಮುಂದಾಗಿದೆ. ಜೊತೆಗೆ ರಸ್ತೆಗಳಲ್ಲಿ ತಡರಾತ್ರಿ ಕಂದಕಗಳನ್ನು ಅಗೆಯಲಾಗಿದೆ. ರಸ್ತೆಯಲ್ಲಿ ಮುಳ್ಳು ಕಂಬಿಗಳನ್ನು ನೆಡುವ ಮೂಲಕ ರೈತರ ವಾಹನಗಳ ಟೈಯರ್ ಪಂಚರ್ ಮಾಡಲು ಯತ್ನಿಸುತ್ತಿದೆ.