ಬೆಂಗಳೂರು: 7ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ರಾಜ್ಯ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಪಠ್ಯಪುಸ್ತಕವನ್ನೂ ಕೇಸರೀಕರಣ ಮಾಡಲು ಬಿಜೆಪಿ ಹೊರಟಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಶಾಲಾ ದಿನಗಳು ಕಡಿತಗೊಂಡಿರುವುದರಿಂದ ಶಿಕ್ಷಣ ಇಲಾಖೆ ಒಂದಿಷ್ಟು ಪಠ್ಯಗಳನ್ನು ಕೈಬಿಡಲು ನಿರ್ಧರಿಸಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ಟಿಪ್ಪು ಸುಲ್ತಾನ್ ನನ್ನು ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದ ಬಿಜೆಪಿ ಸರ್ಕಾರ, ತನ್ನ ಕಾರ್ಯಸೂಚಿ ಸಾಧಿಸಲು ಟಿಪ್ಪು ಪಠ್ಯವನ್ನು ಕೈಬಿಟ್ಟಿದೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಪಠ್ಯಪುಸ್ತಕದಿಂದ ಟಿಪ್ಪು ವಿಚಾರ ಮಾತ್ರವಲ್ಲ ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವ ಮುಂತಾದ ವಿಷಯಗಳನ್ನು ಒಳಗೊಂಡ ಪಠ್ಯವನ್ನು ಕಡಿತ ಮಾಡುತ್ತಿದೆ. ಸಂವಿಧಾನ ರಚನೆಯಲ್ಲಿ ಪಾಲುದಾರರಲ್ಲದ ಬಿಜೆಪಿ ನಾಯಕರು ಹೀಗಾಗಿ ಇತಿಹಾಸವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯ ಮಾತ್ರವಲ್ಲ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿಯೂ ಬಿಜೆಪಿ ಈ ರೀತಿ ಮಾಡಿದೆ. ಎಲ್ಲಾ ಕಡೆಯಲ್ಲಿಯೂ ಇದೇ ಕಥೆ ಆಗಿದೆ. ಪಠ್ಯ ಪುಸ್ತಕ ಕೇಸರೀಕರಣ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಬಿಜೆಪಿ, ಆರ್.ಎಸ್.ಎಸ್. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜನರಿಗೆ ತಿಳಿಸುತ್ತಿಲ್ಲ. ಸ್ವಾತಂತ್ರ್ಯಕ್ಕಾಗಿ ಅವರು ಪಟ್ಟ ಕಷ್ಟ ಹೋರಾಟವನ್ನು ನಾಶಪಡಿಸಿ ಯುವ ಜನತೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಬಗ್ಗೆ ಇರುವ ಇತಿಹಾಸವನ್ನು ಪಠ್ಯದಿಂದ ಅಳಿಸಿಹಾಕುವ ಪ್ರಯತ್ನ ಮಾಡಿರುವುದು ಖಂಡನೀಯ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಟಿಪ್ಪು ಪಠ್ಯವನ್ನು ಕೈಬಿಟ್ಟಿರುವುದು ದುರ್ದೈವ. ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿಯ ದುರ್ಲಾಭ ಪಡೆದು ಇಂತಹ ಕೆಲಸ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಟಿಪ್ಪು ಒಬ್ಬ ದೇಶಭಕ್ತ. ಶಿಕ್ಷಣವನ್ನು ಕೇಸರೀಕರಣ ಮಾಡಲು ಸರ್ಕಾರ ಈ ಹುನ್ನಾರ ನಡೆಸಿದೆ. ಕೆಲವು ಪಠ್ಯದಲ್ಲಿ ಉಳಿಸಿ ಒಂದು ತರಗತಿಯಲ್ಲಿ ಬಿಟ್ಟಿದ್ದು ಸರಿಯಲ್ಲ. ಕೋವಿಡ್ ಸಂಕಷ್ಟ ಪರಿಹರಿಸುವಲ್ಲಿ ಸರ್ಕಾರ ಹೆಚ್ಚಿನ ಗಮನ ಕೊಡಲಿ ಎಂದು ಸಲಹೆ ನೀಡಿದರು.