ಬೆಂಗಳೂರು: ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡು ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಈ ಮೂಲಕ ರೈತರ ಸರ್ವನಾಶಕ್ಕೆ ಅಂಕಿತ ಹಾಕಿದೆ. ಪರಿಣಾಮ ಈ ದಿನ ಕರ್ನಾಟಕದ ಇತಿಹಾಸಲ್ಲಿ ಕರಾಳದಿನವಾಗಿ ಉಳಿಯಲಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಭೂ ಸುಧಾಕರಣಾ ಕಾಯ್ದೆಗೆ ರಾಜ್ಯ ಸರ್ಕಾರ ಕಳೆದ ಹಲವು ದಿನಗಳಿಂದ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ. ಆದರೆ, ವಿರೋಧ ಪಕ್ಷಗಳು, ರೈತರು ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಇದ್ದಾರೆ. ಆದರೆ, ತೀವ್ರ ವಿರೋಧದ ನಡುವೆಯೂ ಕೊರೋನಾ ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ “ಕರ್ನಾಟಕ ಭೂ ಸುಧಾರಣಾ ಕಾಯ್ದೆ”ಗೆ ತಿದ್ದುಪಡಿ ತಂದಿದೆ.
ರಾಜ್ಯ ಸರ್ಕಾರದ ಈ ನಡೆಯನ್ನು ಇಂದು ಪತ್ರಿಕಾಗೋಷ್ಠಿ ನಡೆಸಿ ತೀವ್ರವಾಗಿ ವಿರೋಧಿಸಿರುವ ಸಿದ್ದರಾಮಯ್ಯ, “ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರುವ ಅಗತ್ಯತೆ ಏನಿತ್ತು..? ಕೊರೋನಾ ಸೋಂಕು ಪೀಡಿತ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ, ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಈ ಬಗ್ಗೆ ಹೋರಾಟ ಮಾಡುವುದನ್ನ ಬಿಟ್ಟು ರಾಜ್ಯ ಸರ್ಕಾರ ಕಳ್ಳದಾರಿಯಲ್ಲಿ ಹೊರಟಿದೆ. ರೈತರ ಮರಣ ಶಾಸನ ಬರೆಯಲು ಲಾಕ್‌ಡೌನ್ ವೇಳೆಯನ್ನು ಉಪಯೋಗಿಸಿ ಕೊಂಡಿದೆ” ಎಂದು ಕಿಡಿಕಾರಿದ್ದಾರೆ.
“ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಭೂ ಸುಧಾರಣಾ ಕಾಯ್ದೆಯಲ್ಲಿ ಸೆಕ್ಷನ್ 63ಕ್ಕೆ ತಿದ್ದುಪಡಿ ತಂದು ಒಂದು ಕುಟುಂಬಕ್ಕೆ ಇದ್ದ118ಎಕರೆ ಮಿತಿಯನ್ನು 436 ಎಕರೆಗೆ ಏರಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ.? ರೈತರು ಅಷ್ಟು ಜಮೀನು ತೆಗೆದುಕೊಳ್ತಾರಾ..? ಈ ತಿದ್ದುಪಡಿಯಿಂದಾಗಿ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ಈ ಮೂಲಕ ಬಿಎಸ್ವೈ ಸರ್ಕಾರ ಇಡೀ ರೈತ ಸಮುದಾಯವನ್ನು ನಾಶ ಮಾಡಲು ಹೊರಟಿದೆ. ಭವಿಷ್ಯದಲ್ಲಿ ಎಲ್ಲಾ ರೈತರು ಕಾರ್ಪೋರೆಟ್ ಸಂಸ್ಥೆಗಳ ಬಾಗಿಲು ಕಾಯಬೇಕಾದ ಸ್ಥಿತಿ ಬರುತ್ತೆ. ಬಂಡಾವಳಶಾಹಿಗಳು ಭೂಮಿ ತಗೊಂಡು ರಿಯಲ್ ಎಸ್ಟೇಟ್ ಮಾಡ್ತಾರೆ. ಆನಂತರ ಆಹಾರ ಉತ್ಪಾದನೆ ಎಲ್ಲಿ ಆಗುತ್ತೆ..?” ಎಂದು ಸಿದ್ದರಾಮಯ್ಯ ಕಟುವಾಗಿ ಪ್ರಶ್ನೆ ಮಾಡಿದ್ದಾರೆ.
“ಭೂ ಸುಧಾರಣಾ ಕಾಯ್ದೆಗೆ ದೇವರಾಜ ಅರಸು ಗೇಣಿದಾರರಿಗೆ ನ್ಯಾಯ ದೊರಕಿಸುವಂತೆ ತಿದ್ದುಪಡಿ ಮಾಡಿದ್ದರು. 1974 ರಲ್ಲಿ ಇಡೀ ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆಯನ್ನು ಜಾರಿಗೊಳಿಸಿದ್ದರು. ದೂರದೃಷ್ಟಿಯ ಅವರ ನಾಯಕತ್ವಕ್ಕೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿತ್ತು. ಆದರೆ, ಬಿಎಸ್‌ವೈ ಸರ್ಕಾರ ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಕೃಷಿ ಭೂಮಿಗಳು ಕಾರ್ಪೋರೇಟ್ ಸಂಸ್ಥೆಗಳ ಪಾಲಾಗುವಂತೆ ಮಾಡಿದ್ದಾರೆ. ಅವರ ಈ ಕೆಲಸವನ್ನು ರೈತರು ಎಂದೂ ಕ್ಷಮಿಸಲಾರರು” ಎಂದು ಆಕ್ರೋಶ ಹೊರಹಾಕಿದ್ದಾರೆ.
“ರಾಜ್ಯ ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದೆ. ಇಂತಹ ತಿದ್ದುಪಡಿಗಳು ಯಾವುದೇ ಸರ್ಕಾರಕ್ಕೆ ಶೋಭೆಯಲ್ಲ. ಹೀಗಾಗಿ ಗಣಿ ಅಕ್ರಮದ ಕುರಿತು ಕಾಂಗ್ರೆಸ್ ಹೋರಾಟ ರೂಪಿಸಿದ ರೀತಿಯಲ್ಲೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧವೂ ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ. ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಿಂದಲೂ ರೈತರನ್ನು ಒಗ್ಗೂಡಿಸಿ ಹೋರಾಟವನ್ನು ರೂಪಿಸಲಾಗುವುದು” ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.