janadhvani

Kannada Online News Paper

ಬೋಸ್ನಿಯಾದ ಹದಿನೈದು ಸಾವಿರ ಜನರ ಸಾವಿನ ಮೆರವಣಿಗೆ! ( ದಿ ಡೆಥ್ ಮಾರ್ಚ್)

“ಅವತ್ತು ಆ ಶಾಲೆಯ ಮುಂಭಾಗದಲ್ಲಿ ಎಡಬಲಗಳಲ್ಲಿ ಹೆಣಗಳ ರಾಶಿಯೇ ಬಿದ್ದಿತ್ತು.‌ ನನ್ನ ಪಾಳಿ ಬರುವಷ್ಟರಲ್ಲಿ ನಡುರಾತ್ರಿಯಾಗಿತ್ತು. ನನ್ನ ಶರ್ಟ್ ತೆಗೆಯಲು ಹೇಳಲಾಗಿತ್ತು, ಕೈಗಳನ್ನು ಹಿಂಭಾಗದಲ್ಲಿ ಕಟ್ಟಲಾಗಿತ್ತು.

ನಮ್ಮನ್ನು ಕರೆದೊಯ್ದು ಸಾಲಾಗಿ ನಿಲ್ಲಿಸಲಾಯಿತು. ಹೆಣಗಳ ರಾಶಿಯ ನಡುವೆ ನಾವು. ಗನ್ ಪೌಡರ್ ನ ಕಮಟು ವಾಸನೆ. ಇನ್ನೇನು ಗುಂಡುಗಳು ಮೊರೆಯಲಿವೆ, ನಾವೆಲ್ಲರೂ ಸಾಯಲಿದ್ದೇವೆ. ನನ್ನ ದೇಹ ರಕ್ತ ಹೆಪ್ಪುಗಟ್ಟಿದಂತೆ ಅನಿಸುತ್ತಿತ್ತು.

ಮಂಡಿಯೂರಿ ಕುಳಿತುಕೊಳ್ಳಲು ನಮಗೆ ಹೇಳಲಾಯಿತು. ಆಮೇಲೆ ಒಂದೇ ಸಮನೆ ಬಂದೂಕಿನ ಮೊರೆತ. ಎಲ್ಲೆಲ್ಲಿಗೆ ಗುಂಡು‌ಬಿದ್ದವೋ ಏನೋ? ಹೊಟ್ಟೆಯಲ್ಲಿ, ಎಡಭಾಗದ ಎದೆಯಲ್ಲಿ ತೀವ್ರ ನೋವು. ಮೂರು ಗುಂಡುಗಳು ನನಗೆ‌ ಬಿದ್ದಾಗಿತ್ತು, ನಾಲ್ಕನೆಯದು ಬಲಗೈಗೆ ಬಿದ್ದಿತ್ತು.

ನಮ್ಮ ಕಥೆ ಮುಗಿಯಿತಲ್ಲ, ನಮ್ಮ ಹಿಂದೆ ಇನ್ನೂ ಐವರನ್ನು ಸಾಲಾಗಿ ನಿಲ್ಲಿಸಲಾಯಿತು. ಮತ್ತೆ ಗುಂಡುಗಳು.‌ ಅದರಲ್ಲೊಂದು ನನಗೂ ತಗುಲಿತು. ಈ ಬಾರಿ ಪಾದದ ಮೇಲೆ. ಒಳಗಿಂದ ಸಾವಿನ ಚೀತ್ಕಾರ. ಆ ಕ್ಷಣಕ್ಕೆ ಸಾಯಲು ಬಯಸಿದ್ದೆ ನಾನು. ಅವರು ಹೊಡೆದ ಗುಂಡುಗಳು ಜೀವ ತೆಗೆಯುವಂಥ ಅಂಗಾಂಗಗಳ ಮೇಲೆ ಬಿದ್ದಿರಲಿಲ್ಲ. ಆದರೆ ನೋವು? ಆ ಯಮಯಾತನೆಗಿಂತ ಸಾವು ಮೇಲು ಅನಿಸಿತ್ತು. ನಾನಿನ್ನೂ ಸತ್ತಿಲ್ಲ, ಸಾಯಿಸಿಬಿಡಿ ಎಂದು ಅಂಗಲಾಚಿ ಬೇಡುವಂತಾಯಿತು. ಆದರೆ ಧ್ವನಿ ತೆಗೆಯುವುದಾದರೂ ಎಲ್ಲಿಂದ?

ನನ್ನ ಹಾಗೆ ಹಲವರು ಸಾಯದೆ ನರಳುತ್ತಿದ್ದರು. ಅವರು ಅಂಥವರನ್ನು ಗಮನಿಸಿ ಮತ್ತೆ ಮತ್ತೆ ಶೂಟ್ ಮಾಡಿ ಅವರ ಸದ್ದಡಗಿಸಿದರು‌. ಸಾವು ಅವರ ಆರ್ತನಾದಗಳನ್ನು ತಿಂದುಹಾಕಿತು.

ಎಲ್ಲರೂ ಸತ್ತರೆಂಬುದನ್ನು‌ ಖಚಿತಪಡಿಸಿಕೊಂಡ ನಂತರ ಅವರು ಅಲ್ಲಿಂದ ಹೊರಟರು. ಅವರು ಇನ್ನೊಂದು ಲೋಡ್ ಜನರನ್ನು ಅಲ್ಲಿಗೆ ತರಬೇಕಿತ್ತು, ಹೀಗೇ ಹೊಡೆದು ಸಾಯಿಸಲು. ಎದುರಲ್ಲಿ ಯಾರೋ ಒಬ್ಬರು ತೆವಳುವುದು ಕಾಣಿಸಿತು. ನೀನಿನ್ನೂ ಬದುಕಿದ್ದೀಯಾ ಎಂದರು.‌ ಹೌದು ಎಂದೆ. ಕೈಗಳಿಗೆ ಕಟ್ಟಿದ ಹಗ್ಗ ಬಿಡಿಸು ಎಂದರು. ಬಿಡಿಸಿದೆ. ಇಬ್ಬರೂ ಅಲ್ಲಿಂದ ತೆವಳುತ್ತ ಸಾಗಿದೆವು. ಒಂದು ಚಾನೆಲ್ ತಲುಪುವಷ್ಟರಲ್ಲಿ ಮತ್ತೊಂದು ಲೋಡ್ ಜನರನ್ನು ಕರೆತರಲಾಗಿತ್ತು, ಮತ್ತದೇ ಗುಂಡಿನ‌ಮೊರೆತ, ಮತ್ತದೇ ಸಾವಿನ ಚೀತ್ಕಾರ…. ನಾವು ಹೇಗೋ ಅಲ್ಲಿಂದ ಪಾರಾಗಿ ಹಳ್ಳಿಯೊಂದನ್ನು ತಲುಪಿಕೊಂಡೆವು. ಅಲ್ಲಿನವರು ಮಿಲಿಟರಿ ಆಸ್ಪತ್ರೆಯೊಂದಕ್ಕೆ ಸೇರಿಸಿದರು…”

ಹೀಗೆ ಹೇಳುತ್ತಾ ಹೋಗುತ್ತಾನೆ, ಅವ್ದಿಕ್. ಇದೆಲ್ಲ ನಡೆದು ಇಪ್ಪತ್ತೈದು ವರ್ಷಗಳಾಗಿವೆ. ಆದರೆ ಗಾಯಗಳಿನ್ನೂ ಹಾಗೇ ತಾಜಾ, ಅದು ಒಣಗುವ ಪ್ರಶ್ನೆಯೇ ಇಲ್ಲ. ಬೋಸ್ನಿಯಾದಲ್ಲಿ ನಡೆದು ಹೋದ ಈ ಜನಾಂಗೀಯ ನರಮೇಧಕ್ಕೆ ಇಪತ್ತೈದು ವರ್ಷ ತುಂಬಿದ ನೆನಪಿನಲ್ಲಿ ಅವ್ದಿಕ್ ‘ಅಲ್ ಜಜೀರಾ’ ಗೆ ನೀಡಿದ ಟೆಸ್ಟಿಮೊನಿ ಓದಿದರೆ ನಿಜಕ್ಕೂ ನಮ್ಮ ರಕ್ತ ಹೆಪ್ಪುಗಟ್ಟುತ್ತದೆ.

ಯುಗೋಸ್ಲಾವಿಯಾದಿಂದ ಬೇರೆಯಾದ ಮೇಲೆ ಬೋಸ್ನಿಯಾದ ಮೇಲಿನ ಹಕ್ಕುಸ್ಥಾಪನೆಗಾಗಿ 1992ರಿಂದ 1995ರವರೆಗೆ ಸುದೀರ್ಘ ಯುದ್ಧ ನಡೆಯಿತು. ಇದು ಬಹುಪಕ್ಷೀಯ ಯುದ್ಧ. ಸೆರ್ಬಿಯಾ ಮತ್ತು ಕ್ರೊವೇಶಿಯಾ ಬೆಂಬಲಿತ ಸ್ವಯಂ ಘೋಷಿತ ಸೈನ್ಯಗಳು, ಯುಗೊಸ್ಲಾವಿಯ ಬೆಂಬಲಿತ ಮಿಲಿಟರಿ ಜತೆಗೆ ಬೋಸ್ನಿಯಾ ಸೈನ್ಯ ಈ ಯುದ್ಧದಲ್ಲಿ ಪಾಲ್ಗೊಂಡಿದ್ದವು. ಇದೆಲ್ಲದರ ಜತೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ. ಪರಸ್ಪರ ಹೊಡೆದಾಡಿಕೊಂಡವುಗಳೇ ಮಿತ್ರ ಪಕ್ಷಗಳಾದವು! ಕೊನೆಗೆ ಸತ್ತು ಬಿದ್ದವರು ಒಂದು
ಲಕ್ಷಕ್ಕೂ ಹೆಚ್ಚು ಬೋಸ್ನಿಯಾ ಪ್ರಜೆಗಳು. 1995ರ ಜುಲೈನಲ್ಲಿ ನಡೆದ ಸ್ರೆಬ್ರೆನಿಕಾ ನರಮೇಧ ಜಗತ್ತಿನ‌ ಇತಿಹಾಸದಲ್ಲೇ ಅತ್ಯಂತ ಭಯಾನಕ. ಸತ್ತವರು ಹತ್ತು ಸಾವಿರವಾ? ಇಪ್ಪತ್ತು ಸಾವಿರವಾ? ಯಾರಿಗೆ ಗೊತ್ತು? ಅಧಿಕೃತ ಲೆಕ್ಕದ ಪ್ರಕಾರ 8000.

ಅದು Army of Republika Srpska (VRS) ಎಂಬ ಸ್ವಯಂಘೋಷಿತ ಸೈನ್ಯ. ಬೋಸ್ನಿಯಾ ಯುದ್ಧ ಮತ್ತು ಸೆರ್ಬಿಯನ್ ಯುದ್ಧಗಳಲ್ಲಿ ಪಾಲ್ಗೊಂಡಿತ್ತು. ಬೋಸ್ನಿಯಾದಲ್ಲಿ ಸೆರ್ಬಿಯನ್ನರ ಪ್ರತ್ಯೇಕತೆಗಾಗಿ ಇದನ್ನು ರಚಿಸಲಾಗಿತ್ತು. ನಂತರ ಅದು ಬೋಸ್ನಿಯ ಸೈನ್ಯದೊಂದಿಗೆ ವಿಲೀನಗೊಂಡಿತು. ಸ್ರೆಬ್ರೆನಿಕಾ ನರಮೇಧದ ರೂವಾರಿಯೇ ಈ VRS.

1995ರ ಜುಲೈ 11. ಬೋಸ್ನಿಯಾದ ಸ್ರೆಬ್ರೆನಿಕಾದಲ್ಲಿ ವಿಶ್ವ ಸಂಸ್ಥೆ ಶಾಂತಿಪಾಲನಾ ಪಡೆಯ ರಕ್ಷಣೆಯಲ್ಲಿದ್ದ ಸುರಕ್ಷಿತ ವಲಯದಲ್ಲಿ ಐವತ್ತು ಸಾವಿರ ನಿರಾಶ್ರಿತರು ನೆರೆದಿದ್ದರು. ಆದರೆ ಸೆರ್ಬ್ ಪಡೆಗಳು ದಾಳಿ‌ ನಡೆಸಿದವು. ಸ್ರೆಬ್ರೆನಿಕಾ ಗ್ರೇಟರ್ ಸೆರ್ಬಿಯಾದ ನಗರ ಎಂದು ಘೋಷಿಸುತ್ತ ರಣಕೇಕೆ ಹಾಕುತ್ತ ಬಂದವು. ಸೆರ್ಬಿಯನ್ ಜನರಿಗಾಗಿ ನಾವು ಉಡುಗೊರೆ ಕೊಡುತ್ತಿದ್ದೇವೆ ಎಂದು VRS ನ‌ ಜನರಲ್ ರ‌್ಯಾಟ್ಕೋ ಮ್ಲಾಡಿಕ್ ಟಿವಿ ಕ್ಯಾಮೆರಾಗಳ ಎದುರು ಘೋಷಿಸಿದ.

ಕೊನೆಗೂ ‘ದಹಿ’ಗಳ ವಿರುದ್ಧ ನಾವು ಸೇಡು ತೀರಿಸಿಕೊಳ್ಳಲು ಹೊರಟಿದ್ದೇವೆ. ತುರುಕರ ವಿರುದ್ಧ ನಮ್ಮ ಪ್ರತೀಕಾರ ಈಗ ನಡೆಯಲಿದೆ ಎಂದು ಘೋಷಿಸಿದ. ದಹಿಗಳೆಂದರೆ ಹದಿನಾಲ್ಕನೇ ಶತಮಾನದಲ್ಲಿ ಯುಗೋಸ್ಲಾವಿಯಾವನ್ನು ಆಳಿದ ಆಟೋಮನ್ ಟರ್ಕಿ ಅಧಿಕಾರಿಗಳು. ಸೆರ್ಬಿಯನ್ ಪಡೆಗಳು ಹೇಳಿದಂತೆಯೇ ಮಾಡಿದವು. ಮುಸಲ್ಮಾನ ಸಮುದಾಯದ ಸಣ್ಣ ವಯಸ್ಸಿನ ಹುಡುಗರಿಂದ ಹಿಡಿದು ಮುದುಕರವರೆಗೆ ಎಲ್ಲ ಗಂಡಸರನ್ನು ಬೇರೆ ಮಾಡಿದರು. ಸಾವಿರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು. ಗಂಡಸರ ಮಾರಣಹೋಮ. ದೊಡ್ಡ ದೊಡ್ಡ ಯಂತ್ರಗಳನ್ನು (ಹಿಟ್ಯಾಚಿಯಂಥವು) ತಂದು ಹೆಣಗಳನ್ನು ಹೂಳಲಾಯಿತು. ಮೂವತ್ತು ಸಾವಿರ ಬೋಸ್ನಿಯನ್ ಪ್ರಜೆಗಳನ್ನು ಎರಡೇ ದಿನಗಳಲ್ಲಿ ಖಾಲಿ ಮಾಡಿಸಲಾಯಿತು.‌

ಅವತ್ತು ಜುಲೈ 11, 1995. ಹದಿನೇಳು ವರ್ಷ ವಯಸ್ಸಿನ ನೆಡ್ಜಾದ್ ಅವ್ದಿಕ್ ಪಾಲಿನ ಕರಾಳ‌ ದಿನ.‌ ತಮ್ಮನೆಲ್ಲ ಸುಟ್ಟು ಕೊಲ್ಲಲು ಸೆರ್ಬಿಯನ್ ಪಡೆಗಳು ಬರುತ್ತಿವೆ ಎಂಬುದು ಗೊತ್ತಾದಮೇಲೆ ಸುಮಾರು ಹದಿನೈದು ಸಾವಿರ ಜನರು ಕಾಡು ಮಾರ್ಗದಲ್ಲಿ ನಡೆದು ಸಾಗಲು ತೀರ್ಮಾನಿಸಿದ್ದರು. ಸುಮಾರು ನೂರು ಕಿ.ಮೀ ದೂರಲ್ಲಿದ್ದ ತುಜ್ಲಾ ಎಂಬ ನಗರವನ್ನು ತಲುಪುವುದು ಅವರ ಉದ್ದೇಶವಾಗಿತ್ತು. ಅವ್ದಿಕ್ ತನ್ನ ತಂದೆ, ಚಿಕ್ಕಪ್ಪ, ಕಜಿನ್ ಗಳೊಂದಿಗೆ ಹೆಜ್ಜೆ ಹಾಕುತ್ತಿದ್ದ‌. ಹದಿನೈದು ಸಾವಿರ ಜನರ ಸಾಲುಸಾಲು ಮೆರವಣಿಗೆ! ಅದನ್ನು ಈಗಲೂ ಕರೆಯುವುದು ‘ಡೆಥ್ ಮಾರ್ಚ್’ ಎಂದು. ಅಕ್ಷರಶಃ ಅದು ಸಾವಿನ ಮೆರವಣಿಗೆ. ಸೆರ್ಬಿಯನ್ ಪಡೆಗಳು ಆರ್ಟಿಲರಿ ಗನ್ ಗಳನ್ನು ತಂದು ಉಡಾಯಿಸುತ್ತ ಬಂದರು. ಸಾಲು ಸಾಲು ಹತ್ಯೆಗಳು. ಜನರು ಎಷ್ಟು ಓಡಲು ಸಾಧ್ಯ? ಅವರಿಗಿಂತ ವೇಗವಾಗಿ ಗುಂಡುಗಳು ಬರುತ್ತಿದ್ದವು. ನೋಡನೋಡುತ್ತಿದ್ದಂತೆ ಹದಿನೈದು ಸಾವಿರ ಜನರಲ್ಲಿ ಉಳಿದವರು ಕೇವಲ ಮೂರು ಸಾವಿರ ಮಂದಿ ಮಾತ್ರ! ಮಿಕ್ಕವರೆಲ್ಲ ದಾರಿಯಲ್ಲೇ ಹೆಣವಾದರು. ಅವ್ದಿಕ್ ನ ತಂದೆ, ಚಿಕ್ಕಪ್ಪ, ಕಜಿನ್ ಗಳು ಸಹ.

ಹೀಗೆ ಬದುಕಿ ಉಳಿದವರಿಗಾದರೂ ಸಾವು ತಪ್ಪಿತೇ? ಎರಡು ದಿನಗಳ ನಂತರ ಬದುಕಿ ಉಳಿದವರಿಗಾಗಿ ಸೆರ್ಬಿಯನ್ ಮಿಲಿಟರಿ ಒಂದು ಆಫರ್ ನೀಡಿತು. ಇನ್ನು ನಡೆದು ಪ್ರಯೋಜನವಿಲ್ಲ, ವಾಪಾಸು ಬನ್ನಿ.‌ ನಿಮ್ಮನ್ನು ನಿಮ್ಮ ಕುಟುಂಬದೊಂದಿಗೆ ಸೇರಿಸಲಾಗುವುದು ಎಂದು ಮೆಗಾಫೋನ್ ನಲ್ಲಿ ಕಿರುಚಲಾಯಿತು. ಅವರ ಮಾತು ನಂಬಿ ಕೆಲವರು ಕೆಳಗಿಳಿದು ಬಂದರು. ಹಾಗೆ ಬಂದವರ ಮೇಲೆ ಆರ್ಟಿಲರಿ ಗನ್ ಗಳು‌ ಮೊರೆದವು. ಬಂದವರೆಲ್ಲ‌ ಹುಳಗಳಂತೆ‌ ಚಟಚಟನೆ ಸತ್ತರು.‌

ಕೊನೆಗೆ ಉಳಿದ ಜನರನ್ನು ಸಾಲುಸಾಲಾಗಿ ಬಂದ ಮಿಲಿಟರಿ ಟ್ರಕ್ ಗಳಿಗೆ ತುಂಬಲಾಯಿತು. ಊರ‌ ತುಂಬಾ ಮೆರವಣಿಗೆ ಮಾಡಲು ಬೇಕಿತ್ತಲ್ಲವೇ? ಟರ್ಕಿಷ್ ಮೂಲದವರಲ್ಲದ ಬೋಸ್ನಿಯನ್ನರು (ವಿಶೇಷವಾಗಿ ಸೆರ್ಬಿಯನ್ನರು) ತಮ್ಮ ಮನೆಯ ಕಿಟಕಿ, ತಾರಸಿಗಳಿಂದ‌ ಈ ಮೆರವಣಿಗೆಯನ್ನು‌ ನೋಡಿ ಕಣ್ತುಂಬಿಕೊಂಡರು, ಚಪ್ಪಾಳೆ ಹೊಡೆದರು. ಜ್ಯೂಗಳನ್ನು ಕರೆದೊಯ್ಯುವಾಗ ಜರ್ಮನಿಯಲ್ಲಿ ನಾಜಿ ಸಮುದಾಯದ ಜನರೂ ಹೀಗೇ ರಸ್ತೆಯ ಇಕ್ಕೆಲಗಳಲ್ಲಿ ನೆರೆದು ಚಪ್ಪಾಳೆ ತಟ್ಟಿದ್ದರಲ್ಲವೇ?

ಎಲ್ಲರನ್ನೂ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ಯಲಾಯಿತು. ಅದೊಂದು ಶಾಲೆ. ಎಲ್ಲ ಕೊಠಡಿಗಳನ್ನು ಬಂಧಿತರಿಂದ ಭರ್ತಿ ಮಾಡಲಾಯಿತು. ನಂತರ ಒಂದೊಂದೆ ತಂಡವನ್ನು ಹೊರಗೆ ಕರೆದು ಬಟ್ಟೆ ಬಿಚ್ಚಿಸಿ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸಲಾಯಿತು.‌ ಈ ನರಮೇಧದಲ್ಲಿ ಪವಾಡದಂತೆ ಅವ್ದಿಕ್ ಬದುಕುಳಿದುಬಿಟ್ಟ. ಬದುಕುಳಿದವರು ಹೇಳಿದ ಪ್ರಕಾರ ವಿಶ್ವಸಂಸ್ಥೆಯ ಶಾಂತಿಪಾಲನಾ‌ ಪಡೆಯೂ ಈ‌ ನರಮೇಧ ತಡೆಯಲಿಲ್ಲ. ಅದು ಅಸಹಾಯಕತೆಯಿಂದಲಾ ಅಥವಾ ಉದ್ದೇಶಪೂರ್ವಕವಾಗಿಯಾ ಯಾರು ಹೇಳುವವರು.?

ದಕ್ಷಿಣ ಯೂರೋಪ್ ನ ಬಾಲ್ಕನ್ ಪ್ಯಾಂತ್ಯದ ಬೋಸ್ನಿಯಾ ( ಬೋಸ್ನಿಯಾ ಮತ್ತು ಹೆರ್ಜೆಗೋವಿನಾ) ಈಗಲೂ ಬದಲಾಗಿಲ್ಲ. ಬೋಸ್ನಿಯನ್, ಸೆರ್ಬಿಯನ್, ಕ್ರೊವೇಷಿಯನ್ ಜನರೇ ಅಲ್ಲಿ ಬಲಾಢ್ಯರು. ಮಿಕ್ಕವರೆಲ್ಲರೂ ಅಲ್ಲಿನ‌ ಸಂವಿಧಾನದ ಪ್ರಕಾರ ‘ಇತರರು’ ಅಷ್ಟೆ. ಸ್ರೆಬ್ರೆನಿಕಾ ಈಗಲೂ republics Srpska ಹಿಡಿತದಲ್ಲೇ ಇದೆ.‌ ಯುದ್ಧದ ನಂತರ ನಡೆದ ಡೇಟಾನ್ ಒಪ್ಪಂದದ ಪ್ರಕಾರವೇ ಇದು ನಡೆಯಿತು ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಒಪ್ಪಿಗೆಯೂ ಇತ್ತು.‌

ಎರಡನೇ ವಿಶ್ವ ಯುದ್ಧದ ನಂತರ ಜಗತ್ತಿನ ನಡೆದ ಎರಡು ಪ್ರಮುಖ ಜನಾಂಗೀಯ ನರಮೇಧಗಳೆಂದರೆ, ಬಾಂಗ್ಲಾದೇಶದಲ್ಲಿ ಬಂಗಾಳಿಗಳ ಮೇಲೆ ನಡೆದದ್ದು, ಮತ್ತೊಂದು ಸ್ರೆಬ್ರಿನಿಕಾ ನರಮೇಧ.

ನಮ್ಮ ಕಾಲದ ದುರಂತವೆಂದರೆ ಇತಿಹಾಸದಲ್ಲಿ ನಡೆದುಹೋದ ಘಟನೆಗಳಿಗೆ ಶತಮಾನಗಳ ನಂತರ ಸೇಡು ತೀರಿಸಿಕೊಳ್ಳುವ ಮನಸ್ಥಿತಿಯ, ಇಂಥ ನರಮೇಧಗಳನ್ನೂ ಸಮರ್ಥಿಸಿಕೊಳ್ಳುವ, ಇಂಥದ್ದನ್ನೇ ಭಾಗಶಃ ಮಾಡಿ ಯಶಸ್ವಿಯಾಗಿರುವ, ದೊಡ್ಡ ಪ್ರಮಾಣದಲ್ಲಿ ಮಾಡಲು ಸಂಚು ಹೂಡಿರುವ ಜನರು ನಮ್ಮಲ್ಲಿ, ಇಂಡಿಯಾದಲ್ಲೂ‌ ಇದ್ದಾರೆ. ಅದಕ್ಕಾಗಿಯೇ ಹೊಸ ಬಗೆಯ ಪೌರತ್ವ, ಜನಾಂಗೀಯವಾದ, ಅಲ್ಟ್ರಾ ನ್ಯಾಷನಲಿಸಂ, ಡಿಟೆನ್ಷನ್ ಸೆಂಟರ್ ಗಳು, ದೊಡ್ಡ ಮಟ್ಟದ ಪ್ರಚಾರಾಂದೋಲನಗಳು…

ನಿಮಗೆ ಕ್ರೋನಾಲಜಿ ಅರ್ಥವಾಯ್ತು ಅಂದುಕೊಳ್ಳುವೆ.‌

– ದಿನೇಶ್ ಕುಮಾರ್ ಎಸ್.ಸಿ.

error: Content is protected !! Not allowed copy content from janadhvani.com