🖋️ ಕೊಡಂಗಾಯಿ ಕಾಮಿಲ್ ಸಖಾಫಿ
ವಿದ್ವಾಂಸರ ಮರಣದ ಪರಿಣಾಮವನ್ನು ಹೆಚ್ಚು ತಿಳಿಯುವುದು ಅವರ ಮರಣದ ಬಳಿಕವಾಗಿರುತ್ತದೆ. ಬದುಕಿನುದ್ದಕ್ಕೂ ಸಮಾಜಸೇವೆ, ಆರಾಧನೆ, ಇಲ್ಮ್ ಕಲಿಸುವಿಕೆ ಮುಂತಾದುವುಗಳಿಂದ ತನ್ನ ಬದುಕನ್ನು ಧನ್ಯ ಗೊಳಿಸುವ ವಿದ್ವಾಂಸರು ಈ ಸಮಾಜದ ದಾರಿದೀಪವಾಗಿರುತ್ತಾರೆ.
ವಿಟ್ಲದ ಮೇಗಿನಪೇಟೆ ಜುಮಾ ಮಸೀದಿಯಲ್ಲಿ ಸರಿಸುಮಾರು ಒಂದು ಡಜನ್ ವರ್ಷಗಳ ಕಾಲ ಖತೀಬರಾಗಿ ಧಾರ್ಮಿಕ ವಿಷಯಗಳಲ್ಲಿ ನಾಯಕತ್ವ ವಹಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಅರಿವಿನ ಪ್ರಕಾಶವನ್ನು ನೀಡಿ ಬದುಕು ಬೆಳಗಿಸಿದ ಬಹುಮಾನ್ಯರಾದ ವಿ.ಎಂ ಮಹ್ಮೂದ್ ಉಸ್ತಾದರವರ ಮುಗುಳ್ನಗುವ ಮುಖವನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ.
ವಿಟ್ಲದ ಖತೀಬ್ ಎನ್ನುವಾಗ ತಟ್ಟನೆ ಮನಸ್ಸಿಗೆ ತೇಲಿ ಬರುವುದು ಮಹ್ಮೂದ್ ಉಸ್ತಾದರವರ ಪ್ರಕಾಶಿಸುವ ಆ ಮುಖವಾಗಿರುತ್ತದೆ.!
ಯಾರನ್ನು ಕಂಡರೂ ತನ್ನ ಎಲ್ಲಾ ನೋವುಗಳನ್ನು ಮರೆತು ಮುಗುಳ್ನಕ್ಕು ಕ್ಷೇಮ ವಿಷಯವನ್ನು ಕೇಳಿ ದುಆ ಮೂಲಕ ಹಾರೈಸುವ ಉಸ್ತಾದರವರಿಂದ ಮಂತ್ರಿಸಿ ನೂಲು ಮತ್ತು ನೀರುಗಳ ಮೂಲಕ ಉಪಕಾರ ಪಡೆದವರೇ ವಿಟ್ಲ ಪರಿಸರದ ಹೆಚ್ಚಿನ ಜನರಾಗಿರುತ್ತಾರೆ.
ಎಪ್ಪತ್ತೈದು ವರ್ಷಗಳ ತನ್ನ ಬದುಕನ್ನು ದೀನೀ ಕಾರ್ಯಗಳಿಗೆ ಸಮರ್ಪಿಸಿದ ಉಸ್ತಾದರವರು ವಿಟ್ಲದ ಧಾರ್ಮಿಕ ರಂಗದ ಪ್ರಕಾಶವಾಗಿ ಪ್ರಜ್ವಲಿಸಿದ್ದರು. ಅವರ ವಿಯೋಗವು ವಿಟ್ಲದ ವಿದ್ವತ್ ಬೆಳಕನ್ನು ನಂದಿಸಿ ಬಿಟ್ಟಿದೆ.!
ಸುನ್ನೀ ಜಂಇಯ್ಯತುಲ್ ಉಲಮಾ ವಿಟ್ಲ ಝೋನ್ ಸದಸ್ಯರಾದ ಅಬ್ದುರ್ರಹ್ಮಾನ್ ಸಅದಿ (ಕಡಂಬು ಖತೀಬ್), ಸುನ್ನೀ ಜಮ್ಇಯತುಲ್ ಮುಅಲ್ಲಿಮೀನ್ ಪೈವಳಿಕೆ ರೇಂಜ್ ನಾಯಕ ಅಬ್ದುಲ್ ಜಲೀಲ್ ಸಖಾಫಿ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವಿಟ್ಲ ಡಿವಿಷನ್ ಸಮಿತಿ ಸಕ್ರಿಯ ಕಾರ್ಯಕರ್ತ ನೌಫಲ್ ಮದನಿ, ಎಸ್ ವೈ ಎಸ್ ವಿಟ್ಲ ಟೌನ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಖಾದರ್, ಮೇಗಿನಪೇಟೆ ಯೂನಿಟ್ ಎಸ್ಎಸ್ಎಫ್ ಕಾರ್ಯದರ್ಶಿ ಉಬೈದ್ ರವರು ಅವರು ಗಂಡು ಮಕ್ಕಳಾಗಿದ್ದಾರೆ. ಐದು ಹೆಣ್ಣುಮಕ್ಕಳ ಪತಿಯಂದಿರರು ಕೂಡಾ ವಿದ್ವಾಂಸರಾಗಿದ್ದು ಅವರ ಇಲ್ಮಿನ ಸ್ನೇಹವನ್ನು ಗಮನಿಸಬಹುದು.
ಗಂಡು ಮಕ್ಕಳನ್ನು ಸಂಘಟನಾ ಕಾರ್ಯಾಚರಣೆಗೆ ಸಮರ್ಪಿಸಿದ ಮಹ್ಮೂದ್ ಉಸ್ತಾದರವರು ಮಹಾ ಭಾಗ್ಯವಂತರೆಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ.!!
ಅವರ ಪರಲೋಕ ಬದುಕು ಉಜ್ವಲವಾಗಲಿ. ಅವರ ಸ್ಥಾನವು ಇನ್ನಷ್ಟು ಉನ್ನತಿಗೇರಲಿ. ಅವರೊಂದಿಗೆ ನಮ್ಮನ್ನೂ ಸ್ವರ್ಗದಲ್ಲಿ ಅಲ್ಲಾಹು ಒಟ್ಟುಗೂಡಿಸಲಿಯೆಂದು ಪ್ರಾರ್ಥಿಸೋಣ..!