ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಆಯೋಜಿಸಿದ ಪ್ರಥಮ ಚಾರ್ಟರ್ಡ್ ವಿಮಾನ 150 ಪ್ರಯಾಣಿಕರೊಂದಿಗೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಣ್ಣೂರು ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ರಸ್ತೆ ಸಾರಿಗೆ ಮೂಲಕ ಸುರಕ್ಷಿತವಾಗಿ ಮಂಗಳೂರು ತಲುಪಿದ್ದು ಎಲ್ಲಾ ಪ್ರಯಾಣಿಕರು ಸಂತೋಷದಿಂದ ತಮ್ಮ ಯಾತ್ರಾನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಕೋವಿಡ್ 19 ನಿಂದ ಸಂಕಷ್ಟ ಅನುಭವಿಸುತ್ತಿರುವಂತಹ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿಗೆ ಕಳುಹಿಸಿಕೊಡಬೇಕೆಂಬ ಧೃಡ ಪ್ರತಿಜ್ಞೆಯೊಂದಿಗೆ ಹೆಜ್ಜೆಯಿಟ್ಟು ಪ್ರಥಮ ಯಾತ್ರೆಯ ಯಶಸ್ವಿ ಅನುಭವದೊಂದಿಗೆ ಎರಡನೇ ಯಾತ್ರೆಯ ಕಾರ್ಯ ಯೋಜನೆಗಳು ಅಂತಿಮ ಹಂತದಲ್ಲಿದೆ.
ಕೆಸಿಎಫ್ ಯುಎಇ ಆಯೋಜಿಸುವ ಎರಡನೇ ಚಾರ್ಟರ್ಡ್ ವಿಮಾನ ನಾಳೆ ಮುಂಜಾನೆ (ಜುಲೈ 2 ರಂದು) 168 ಪ್ರಯಾಣಿಕರನ್ನು ಹೊತ್ತು ಏರ್ ಅರೇಬಿಯಾ ಸಂಸ್ಥೆಯ ನಿಮಾನದ ಮೂಲಕ ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ. ಈಗಾಗಲೇ ಬುಕಿಂಗ್ ಮುಗಿದಿದ್ದು ವಿಮಾನಯಾನದ ಅಂತಿಮ ಕಾರ್ಯ ಯೋಜನೆಗಳು ಪ್ರಗತಿಯಲ್ಲಿದೆ. ಬೆಳಗ್ಗೆ 7 ಗಂಟೆಗೆ ಪ್ರಯಾಣ ಹೊರಡಲಿದ್ದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಲ್ಫ್ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಅನಿವಾಸಿ ಕನ್ನಡಿಗರ ಭರವಸೆಯ ಬೆಳಕಾಗಿ ಕೆಸಿಎಫ್ ಕಾರ್ಯಾಚರಿಸುತ್ತಿದ್ದು ಸಾಮಾಜಿಕ ಶೈಕ್ಷಣಿಕ ಸಾಮುದಾಯಿಕ ಕಾರ್ಯಯೋಜನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಕೆಸಿಎಫ್ ಉತ್ತಮವಾದ ಸಂಘಟನಾ ನೆಟ್ವರ್ಕ್ ಹೊಂದಿದ್ದು ಯುಎಇಯ ಎಲ್ಲಾ ಎಮಿರೇಟ್ಸ್ ಗಳಲ್ಲೂ 24/7 ಕಾರ್ಯಕರ್ತರು ಸಹಾಯಕ್ಕೆ ಸಜ್ಜಾಗಿದ್ದಾರೆ. ಅಗತ್ಯಕ್ಕೆ ಅನುಸಾರವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಮಾನಯಾನವನ್ನು ಆರಂಭಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು.
ಸಂಕಷ್ಟದಲ್ಲಿರುವ ಹಲವು ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಲಿದ್ದು, ಗರ್ಭಿಣಿಯರು, ತುರ್ತು ವೈದ್ಯಕೀಯ ಅವಶ್ಯಕತೆಗಾಗಿ ತಾಯ್ನಾಡಿಗೆ ಪ್ರಯಾಣಿಸುವವರು, ಕೆಲಸ ಕಳೆದುಕೊಂಡು ಸಂಕಷದಲ್ಲಿರುವಂತ ಹಲವರು ಈ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.