ದುಬೈ: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ 19 ಮಹಾಮಾರಿಯು ಎಲ್ಲಾ ಧಾರ್ಮಿಕ ಸ್ಥಳಗಳನ್ನು ಕೂಡಾ ತಿಂಗಳುಗಟ್ಟಲೆ ಮುಚ್ಚಿ ಹಾಕುವಂತೆ ಮಾಡಿದ್ದು ಇದೀಗ ಯುಎಯಿ ಸರಕಾರವು ಕೆಲವೊಂದು ಷರತ್ತು ಗಳನ್ನು ವಿಧಿಸಿ ಮಸೀದಿಗಳಿಗೆ ಸಾಮೂಹಿಕ ನಮಾಝ್ ನಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಇಂದಿನಿಂದ ಅವಕಾಶ ನೀಡಿದೆ.ಸಾಮರ್ಥ್ಯದ 30% ಜನರಿಗೆ ಮಸೀದಿಗಳಲ್ಲಿ ಜಮಾ ಅತ್ ಆಗಿ ನಮಾಝ್ ನಿರ್ವಹಿಸಲು ಸರಕಾರ ಅವಕಾಶ ಮಾಡಿಕೊಟ್ಟಿದ್ದು ಅದರಂತೆ ದೇಶದಾದ್ಯಂತ ಇಂದು ಸುಬುಹಿ ನಮಾಝ್ ನೊಂದಿಗೆ ಮಸೀದಿಗಳ ಬಾಗಿಲು ಸಾರ್ವಜನಿಕರಿಗೆ ಮುಕ್ತವಾಗಿದೆ. ಕಳೆದ ರಾತ್ರಿಯ ಇಶಾ ನಮಾಝ್ ನಿರ್ವಹಿಸುವ ವರೆಗೂ “ನಮಾಝ್ ಗಳನ್ನು ಮನೆಯಲ್ಲೇ ನಿರ್ವಹಿಸಿ” ಎಂದು ಕರೆ ನೀಡುತ್ತಿದ್ದ ಮಸೀದಿಯ ಮಿನಾರಗಳಲ್ಲಿ ಇಂದು ಸುಬುಹಿ ನಮಾಝ್ ಗೆ “ನಮಾಝ್ ನಿರ್ವಹಿಸಲು ಬನ್ನಿ” ಎಂಬ ಆಹ್ವಾನ ಕೇಳಿ ಬಂತು.
ಆದರೆ ಶುಕ್ರವಾರದ ಜುಮಾ ನಮಾಝ್ ಗೆ ಇನ್ನೂ ಸರಕಾರದ ಅಧಿಕೃತ ಅನುಮತಿ ದೊರೆತಿಲ್ಲ, ಪ್ರತೀ ನಮಾಝ್ ಗೆ ಆದಾನ್ ಬಳಿಕ 5 ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದ್ದು ಸುಬುಹಿ ನಮಾಝ್ ಗೆ ಮಾತ್ರ 10 ನಿಮಿಷಗಳ ಸಮಯಾವಧಿ ನೀಡಲಾಗಿದೆ. ನಮಾಝ್ ಮುಗಿದ ತಕ್ಷಣ ಮಸೀದಿಯ ಬಾಗಿಲುಗಳು ಮುಚ್ಚಲ್ಪಡುತ್ತವೆ ಮತ್ತು ಆದಾನ್ ಹಾಗೂ ನಮಾಝ್ ಇವುಗಳಿಗೆ ಒಟ್ಟು 20 ನಿಮಿಷಗಳ ಸಮಯ ನಿಗದಿಗೊಳಿಸಲ್ಪಟ್ಟಿದೆ.