ಮಂಗಳೂರು:ಇಲ್ಲಿನ ಕೇಂದ್ರ ಜುಮಾ ಮಸೀದಿ ವ್ಯಾಪ್ತಿಯಲ್ಲಿ ಸಮಾಜ ಸೇವಕನಾಗಿ ಗುರುತಿಸಲ್ಪಟ್ಟ ಜಾಕಿ ಯಾನೆ ಝಾಕಿರ್ ವಿರುದ್ಧ ಮಂಗಳೂರು ಖಾಝಿಯವರಿಗೆ ಕೊಲೆ ಬೆದರಿಕೆ ಮತ್ತು ಹಲ್ಲೆಯ ಪೂರ್ವಸಿದ್ದತೆಯ ಕೇಸನ್ನು ದಾಖಲಿಸಿದ ಪ್ರಕರಣ ಮಂಗಳೂರು ಬಂದರು ಠಾಣೆಯಲ್ಲಿ ನಡೆದಿದೆ.
ಬಂದರು ಪ್ರದೇಶದ ಸಮಾಜ ಸೇವಕ ಜಾಕಿ ಯಾನೆ ಝಾಕಿರ್ ರವರು ಜೂ.13ರಂದು ದ.ಕ.ಜಿಲ್ಲಾ ಖಾಝಿಯವರನ್ನು ಕೇಂದ್ರ ಜುಮ್ಮಾ ಮಸೀದಿಯ ಮುಂದೆ ಅಡ್ಡಗಟ್ಟಿ ತಲವಾರು ಝಲಪಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂದೂ ಮಾತ್ರವಲ್ಲ ಖಾಝಿ ಭವನಕ್ಕೂ ಹೋಗಿ ನಿಂದಿಸಿದ್ದಾಗಿಯೂ ಈ ಪ್ರಕರಣಕ್ಕೆ ರಿಯಾಝುದ್ದೀನ್ ಎಂಬವರು ಕುಮ್ಮಕ್ಕು ನೀಡಿದ್ದಾರೆಂದೂ ಇಬ್ಬರ ಮೇಲೆ ರಝಾಕ್ ಎಂಬವರು ದಿನಾಂಕ 15-6-2020 ಕ್ಕೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಎಫ್.ಐ.ಆರ್ ಮಾಡಿಸಿದ್ದಾರೆ.
ಪೊಲೀಸರು ಜಾಕಿ ಹಾಗೂ ರಿಯಾಝ್ ರನ್ನು ವಶಕ್ಕೆ ಪಡಿದುಕೊಂಡು ಮಸೀದಿಯ ಸಿ.ಸಿ.ಕ್ಯಾಮೆರಾವನ್ನು ಪರಿಶೀಲಿಸಿದಾಗ ಇಂತಹ ಯಾವುದೇ ದೃಶ್ಯ ಕ್ಯಾಮೆರಾದಲ್ಲಿ ಕಂಡು ಬಾರದೇ ಇದ್ದುದರಿಂದ ಹಾಗೂ ಮಸೀದಿಯ ಅಕ್ಕ ಪಕ್ಕದವರಲ್ಲಿ ವಿಚಾರಿಸಿದಾಗಲೂ ಇಂತಹ ಯಾವುದೇ ಪ್ರಕರಣ ಅಲ್ಲಿ ನಡೆದಿಲ್ಲ ಎಂಬ ಹೇಳಿಕೆ ಪ್ರಕರಣದ ಬಗ್ಗೆ ಮೇಲ್ನೋಟಕ್ಕೆ ಸಂಶಯ ವ್ಯಕ್ತವಾಗಿದೆ.
ನಗರದಲ್ಲಿ ಕೊರೋನಾ ಲಾಕ್ ಡೌನ್ ನಂತರ ಜಿಲ್ಲೆಗೆ ಬಾರದಿದ್ದ ಖಾಝಿಯವರು, ಇತ್ತೀಚೆಗೆ ಜಿಲ್ಲೆಯಲ್ಲಿ ಮರಣ ಹೊಂದಿದ ಕೆಲವರ ಮನೆಗೆ ಮತ್ತು ಕುದ್ರೋಳಿಗೆ ಭೇಟಿ ನೀಡಿದ್ದಾರಾದರೂ ಮಂಗಳೂರು ಬಂದರು ಕೇಂದ್ರ ಜಮಾ ಮಸೀದಿ ಮತ್ತು ಖಾಝಿ ಹೌಸಿಗೆ ಇಷ್ಟರ ತನಕ ಬಂದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾದ ಮಾಜೀ ಮೇಯರ್ ಕೆ.ಅಶ್ರಫ್ “ಅಮಾಯಕರಾದ ಜಾಕಿ ಮತ್ತು ರಿಯಾಝ್ ರವರ ಮೇಲೆ ಸುಳ್ಳು ಕೇಸು ದಾಖಲಿಸಲು ಜವಾಬ್ದಾರಿಯುತ ಸ್ಥಾನದಲ್ಲಿರುವ ಖಾಝಿಯವರು ರಝಾಕ್ ರವರಿಗೆ ನಿರ್ದೇಶನ ನೀಡಿದ್ದಾಗಿ ಮೇಲ್ನೋಟದಿಂದ ತಿಳಿದು ಬರುತ್ತಿದ್ದು ಇದರ ಹಿಂದೆ ಯಾವುದೋ ಷಡ್ಯಂತ್ರ ಇರುವುದಾಗಿ ತಿಳಿದು ಬರುತ್ತಿದೆ. ಮಂಗಳೂರು ಕೇಂದ್ರ ಜುಮಾ ಮಸೀದಿಗೆ ಸಾವಿರದ ನಾಲ್ಕುನೂರು ವರ್ಷಗಳ ಇತಿಹಾಸವಿದ್ದು ಇದೊಂದು ಪುರಾತನ ಕೇಂದ್ರವಾಗಿರುತ್ತದೆ. ಪ್ರಸ್ತುತ ಸುಳ್ಳು ಕೇಸು ದಾಖಲಿಸಿರುವುದು ಈ ಪವಿತ್ರ ಸ್ಥಳಕ್ಕೆ ಕಳಂಕ ತರುವಂತಾಗಿದ್ದು ಇದರ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಈ ಷಡ್ಯಂತ್ರದ ಹಿಂದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಯಾರು ಜಾಕಿ ಯಾನೆ ಝಾಕಿರ್?
ಮಂಗಳೂರಿನಲ್ಲಿ ಜಾಕಿ ಎಂಬ ನಾಮದಲ್ಲಿ ಗುರುತಿಸಲ್ಪಡುವ ಝಾಕಿರ್,ಕೇಂದ್ರ ಜುಮಾ ಮಸೀದಿ ವ್ಯಾಪ್ತಿಯಲ್ಲಿನ ಮಯ್ಯಿತ್ ಪರಿಪಾಲನೆ(ಅಂತ್ಯಕ್ರಿಯೆ), ಬಡವರಿಗೆ ನೆರವು ನೀಡುವಲ್ಲಿ, ವೆನ್ಲಾಕ್ ಆಸ್ಪತ್ರೆಯಲ್ಲಿ ವಾರಿಸುದಾರರಿಲ್ಲದ ಮಯ್ಯತ್ ನ ಅಂತ್ಯಕ್ರಿಯೆಗೆ ಸಹಕಾರ, ಧಾರ್ಮಿಕ ಕಾರ್ಯಕ್ರಮ ಮತ್ತು ಸಾಮಾಜಿಕ ಸೇವೆಯಲ್ಲಿ ನಿರತರಾಗಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದಿದ್ದು, ಇವರು ಖಾಝಿಯವರ ಆಪ್ತರೂ ಆಗಿದ್ದರು.
ದೂರು ದಾಖಲಿಸಿದ ರಝಾಖ್:
ಮಂಗಳೂರಿನ ಖಾಝಿಯವರು ಅಧ್ಯಕ್ಷರಾಗಿರುವ ದಾರುನ್ನೂರು ಎಜ್ಯುಕೇಶನ್ ಸೆಂಟರ್ ಕಾಶಿಪಟ್ನ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಮುಖಂಡ,ಖಾಝಿಯವರ ಪರಮ ಆಪ್ತನಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ನಿಕಟವರ್ತಿಯಾಗಿದ್ದಾರೆ ಎನ್ನಲಾಗಿದೆ.