janadhvani

Kannada Online News Paper

ಎರಡುವರೆ ತಿಂಗಳ ಬಳಿಕ ರಸ್ತೆಗಿಳಿದ ಖಾಸಗಿ ಬಸ್- ಸಂಪೂರ್ಣ ಸ್ಯಾನಿಟೈಝರ್ ಸಿಂಪಡನೆ

ಮಂಗಳೂರು: ಕೋರೋನಾ ವೈರಸ್ ನಿಂದಾಗಿ ಬಸ್ ಸಂಚಾರವನ್ನು ನಿರಬಂಧಿಸಲಾಗಿದ್ದು, ಸುಮಾರು ಎರಡುವರೆ ತಿಂಗಳ ಬಳಿಕ ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ರಸ್ತೆಗಿಳಿದಿವೆ. ಮಾ.22ರಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರವು ಜೂ.1ರಿಂದ ಆರಂಭಗೊಂಡಿದೆ.

ರಾಜ್ಯ ಸರಕಾರ ಸೂಚಿಸಿದ ಮಾರ್ಗಸೂಚಿ ಪ್ರಕಾರ ಜೂ.1ರಿಂದ ಖಾಸಗಿ ಬಸ್‌ಗಳನ್ನು ಓಡಿಸುವ ಬಗ್ಗೆ ಬಸ್ ಮಾಲಕರ ಸಂಘವು ತೀರ್ಮಾನಿಸಿದೆ. ಸಂಘವು ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದು, ಅವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ಪ್ರತೀ ಬಸ್ಸಿನಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಬಸ್ ಮಾಲಕರಿಗೆ ನಷ್ಟವನ್ನುಂಟು ಮಾಡಲಿದೆ. ಹಾಗಾಗಿ ಬಸ್ ಪ್ರಯಾಣ ದರ ಹೆಚ್ಚಳಗೊಳ್ಳುವ ಸಾಧ್ಯತೆ ಇದೆ. ಸುರಕ್ಷತಾ ಕ್ರಮವಾಗಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಪೂರ್ತಿ ಬಸ್ ಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಬಸ್ಸುಗಳ ಒಳಗೆ ಮತ್ತು ಹೊರಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಬಸ್ ಗಳ ಸೀಟ್, ಫುಟ್ ಬೋರ್ಡ್ ಗಳಿಗೆ ಸಂಪೂರ್ಣ ಸ್ಯಾನಿಟೈಝರ್ ಸಿಂಪಡನೆ ಮಾಡಲಾಗುತ್ತಿದ್ದು, ಪ್ರತೀ ಟ್ರಿಪ್ ನ ಬಳಿಕ ಸ್ಯಾನಿಟೈಝರ್ ಸಿಂಪಡಿಸಲಾಗುತ್ತದೆ.

ಸರಕಾರದ ನಿಯಮದಂತೆ ಅರ್ಧದಷ್ಟು ಪ್ರಯಾಣಿಕರನ್ನು ತುಂಬಿಕೊಂಡು ಬಸ್ ಗಳು ಪ್ರಯಾಣ ಆರಂಭಿಸಿದೆ. ಪ್ರಾರಂಭಿಕ ಹಂತದಲ್ಲಿ ಕೆಲವೇ ಬಸ್ಸುಗಳ ಓಡಾಟವನ್ನು ಪ್ರಾರಂಭಿಸಿ, ಪ್ರಯಾಣಿಕರ ಬೇಡಿಕೆಯ ಮೇರೆಗೆ ಮತ್ತು ಜನಸಂದಣಿ, ಸುರಕ್ಷಿತ ಅಂತರ ಕಾಪಾಡುವ ನಿಟ್ಟಿನಲ್ಲಿ ಬಸ್ಸುಗಳ ಸಂಖ್ಯೆ ಕ್ರಮೇಣ ಹೆಚ್ಚಿಸಲು ಖಾಸಗಿ ಬಸ್‌ಗಳ ಮಾಲಕರಿಗೆ ಆರ್‌ಟಿಒ ಸೂಚಿಸಿದೆ.ಸಾರ್ವಜನಿಕರು ಸುರಕ್ಷಿತ ಅಂತರ, ಮಾಸ್ಕ್ ಹಾಗೂ ಕೈಗಳಿಗೆ ಸ್ಯಾನಿಟೈಝರ್ ಬಳಸುವುದು ಹಾಗೂ ತಮ್ಮದೇ ಆದ ಆಹಾರ, ನೀರು ಉಪಯೋಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರಯಾಣಿಕರು ಗುರುತಿನ ಚೀಟಿ/ ಆಧಾರ ಕಾರ್ಡ್ ತಮ್ಮಲ್ಲಿಟ್ಟುಕೊಂಡು ಪ್ರಯಾಣಿಸಲು ಸೂಚಿಸಲಾಗಿದೆ. ವಾಹನಗಳ ಮಾರ್ಗಸೂಚಿ ಪ್ರಕಾರ ಬಸ್ ಸ್ಯಾನಿಟೈಝೇಶನ್, ಡ್ರೈವರ್/ಕಂಡೆಕ್ಟರ್ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ ಸೂಚಿಸಿದ್ದಾರೆ.

error: Content is protected !! Not allowed copy content from janadhvani.com