ತುಮಕೂರು: ರೈತ ಮಹಿಳೆಗೆ ಅಶ್ಲೀಲವಾಗಿ ನಿಂದಿಸಿದನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವರು ಖಂಡಿಸಿದ ಬೆನ್ನಲ್ಲೀಗ ಎಚ್ಚೆತ್ತ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೋಲಾರ ಭಾಗದಲ್ಲಿ ನೀರು ಸಿಗುತ್ತಿಲ್ಲ ಎಂದಿದ್ದಕ್ಕೆ ಸಮಸ್ಯೆ ಕೇಳಲು ಹೋಗಿದ್ದೆ. ನನಗೆ ಏರು ಧ್ವನಿಯಲ್ಲಿ ಮಾತಾಡಿದರು. ಹೀಗಾಗಿ ನಾನು ಜೋರು ಮಾಡಬೇಕಾಯ್ತು ಎಂದರು.
ನಾವು ಚಿಂತಾಮಣಿಯಲ್ಲಿ ಕೆರೆಗೆ ನೀರು ಬಿಡುವ ವಿಚಾರ ಸಂಬಂಧ ಪರಿಶೀಲನೆಗಾಗಿ ಅಲ್ಲಿಗೆ ತೆರಳಿದ್ದೆವು. ಅವರು ರೈತ ಸಂಘದವರು ಎಂದು ಗೊತ್ತಿರಲಿಲ್ಲ. ಕಾರ್ಯದರ್ಶಿಗೆ ಉತ್ತರ ನೀಡಿ ಎಂದು ಹೇಳಿದ್ದೆ. ಆಗ 130 ಎಕರೆ ಒತ್ತುವರಿಯಾಗಿದೆ ಎಂದು ಮಾತಾಡಿದರು. ಏನಮ್ಮ ಈ ಪ್ರಶ್ನೆ ನನ್ನ ಕೇಳ್ತೀಯಾ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಹೀಗಾಯ್ತು ಎಂದು ಹೇಳಿದರು.
ಹೀಗೆ ಮುಂದುವರಿದ ಅವರು, ಆಗ ಅವರು ನನಗೇ ಏನ್ರೀ ಮಾಡ್ತಿದೀರಿ? ಅಂತ ಕೇಳಿದ್ರು. ನನಗೂ ಸ್ವಾಭಿಮಾನವಿದೆ. ಆದೇಶ ಕೊಡಲಿಕ್ಕೆ ಬರಬೇಡ, ರಿಕ್ವೆಸ್ಟ್ ಮಾಡಿ ಎಂದೆ. ಹೀಗೆ ಹೇಳಿದ ಮೇಲೂ ಏರು ಧ್ವನಿಯಲ್ಲೇ ಮಾತಾಡಿದರು. ನಾವೇನು ಆ ಊರಿಗೆ ಬೈಸಿಕೊಳ್ಳುವುದಕ್ಕೆ ಹೋಗಿದ್ದೆವಾ? ಪ್ರತಿ ಬಾರಿಯೂ ಅವರದ್ದು ಇಂತಹುದ್ದೆ ವರ್ತನೆ ಎಂದು ಹೇಳಿದರು. ಹಾಗಾಗಿ ಹೀಗೆ ಮಾತಾಡಿದೆ ಎಂದರು.
ಈ ಗಲಾಟೆ ನಡೆಯಬಾರದಿತ್ತು. ಆಯಮ್ಮ ಅದೇ ರೀತಿ ನಡೆದುಕೊಂಡು ಬಂದಿದ್ದಾರೆ. ನನ್ನನ್ನ ಯಾರೂ ತಬ್ಬಿಕೊಂಡು ಮುತ್ತೂ ಕೊಟ್ಟಿಲ್ಲ. ನನ್ನ ನಾಯಕರು ರಾಜೀನಾಮೆ ಕೇಳಿದರೇ ಒಂದು ಕ್ಷಣವೂ ಸುಮ್ಮನಿರೋದಿಲ್ಲ. ಹೆಣ್ಣುಮಕ್ಕಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.
ನನಗೇನು ನಾನು ರಾಸ್ಕಲ್ ಅಂದದ್ದು ಕೆಟ್ಟ ಪದ ಅನಿಸಲಿಲ್ಲ. ಸಿದ್ದರಾಮಯ್ಯ ನನಗೆ ಅವಕಾಶ ನೀಡಿಲ್ಲ. ಸಿಎಂ ಇಲ್ಲಿವರೆಗೂ ನನಗೆ ಮಾತನಾಡಿಲ್ಲ ಎಂದು ಸಮರ್ಥಿಸಿಕೊಂಡರು.