ದುಬೈ: ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದ ಯುಎಇ ಕನ್ನಡಿಗರನ್ನು ಹೊತ್ತು ತಂದ ವಿಮಾನದ ಪ್ರಯಾಣಿಕರೊಂದಿಗೆ ತಡರಾತ್ರಿವರೆಗೂ ಅನ್ನ ಪಾನೀಯ ನೀಡದೆ ಅಮಾನವೀಯವಾಗಿ ವರ್ತಿಸಿದ್ದನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಖಂಡಿಸುತ್ತದೆ.
ಹಲವಾರು ಒತ್ತಡಗಳ ಮೇರೆಗೆ ಊರಿಗೆ ಪ್ರಯಾಣ ಲಭಿಸಿದರೂ ಅದನ್ನು ಸರಿಯಾಗಿ ನಿಭಾಯಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಫಲವಾಗಿದೆ ಎಂದು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ। ಶೈಖ್ ಬಾವ ಮಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರು ವಯಸ್ಕರು ಮಕ್ಕಳು ಯಾವುದೇ ಅನ್ನಪಾನೀಯವಿಲ್ಲದೆ ಬೆಳಗ್ಗಿನ ಜಾವ 4 ಗಂಟೆಯವರೆಗೆ ಏರ್ಪೋರ್ಟ್ ನಲ್ಲೇ ಉಳಿಯುವಂತೆ ಮಾಡಿರುವುದು ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ.
ಕುಡಿಯಲು ನೀರು ನೀಡದ ಏರ್ಪೋರ್ಟ್ ಸಿಬ್ಬಂದಿಗಳ ದುರ್ವರ್ತನೆ ಖಂಡನೀಯವಾಗಿದೆ. ಸರಿಯಾದ ರೀತಿಯ ಕ್ವಾರೈಂಟೇನ್ ವ್ಯವಸ್ಥೆ ಏರ್ಪಡಿಸದೆ ಕಷ್ಟ ನಷ್ಟಗಳನ್ನು ಎದುರಿಸಿ ಮುಂದಿನ ಜೀವನದ ಬಗ್ಗೆ ಗೊಂದಲಗಳಿಗೆ ಸರಿಯಾದ ಉತ್ತರವಿಲ್ಲದೆ ಮಾನಸಿಕವಾಗಿ ನೊಂದಿರುವ ಅನಿವಾಸಿಗಳಿಂದ ಕ್ವಾರೈಂಟೆನ್ ಹೆಸರಿನಲ್ಲಿ ಜಿಲ್ಲಾಡಳಿತ ದಂಧೆಗಿಳಿದಿರುವುದು ಅನಿವಾಸಿ ಕನ್ನಡಿಗರಿಗೆ ಮಾಡುವ ದ್ರೋಹವಾಗಿದೆ ಎಂದು ಅವರು ಒತ್ತಿ ಹೇಳಿದರು.