ನಿನ್ನೆ ಮಂಗಳೂರು ವಿಮಾನ ನಿಲ್ದಾನದಲ್ಲಿ ಬಂದಿಳಿದ, ಅನಿವಾಸಿ ಕನ್ನಡಿಗರನ್ನು ಕರೆತಂದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕ್ವಾರಂಟೈನ್ ಗೊಳಪಡಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ವಿಮಾನ ನಿಲ್ದಾನದಲ್ಲಿ ಪ್ರಯಾಣಿಕರನ್ನು ಸತಾಯಿಸಿದ ಜಿಲ್ಲಾಡಳಿತದ ಅಪಕ್ವ ನಡೆಯನ್ನು ಮುಸ್ಲಿಂ ಜಮಾಅತ್ ಬಲವಾಗಿ ಖಂಡಿಸಿದೆ.
ವಿದೇಶದಿಂದ ಬರುವ ಅನಿವಾಸಿಗಳಿಗೆ ತೊಂದರೆಯಾಗಬಾರದೆಂಬ ನೆಲೆಯಲ್ಲಿ ಮಾಣಿ ಬಳಿಯ ದಾರುಲ್ ಇರ್ಷಾದ್ ಮತ್ತು ಮಂಜನಾಡಿಯ ಅಲ್ ಮದೀನಾ ವಿದ್ಯಾಸಂಸ್ಥೆಗಳನ್ನು ಕ್ವಾರಂಟೈನ್ ಕೇಂದ್ರವಾಗಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು, ಅಲ್ಲದೆ ಈ ಎರಡೂ ಕೇಂದ್ರಗಳಲ್ಲಿ ಕ್ವಾರಂಟೈನ್ ಗೆ ಒಳಗಾಗುವ ಎಲ್ಲರಿಗೂ ಉಚಿತ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ನೀಡುವ ಬಗ್ಗೆಯೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು.
ಜಿಲ್ಲಾಡಳಿತ ಪಟ್ಟಿ ಮಾಡಿದ ಕ್ವಾರಂಟೈನ್ ಸೆಂಟರ್ ಗಳ ಪಟ್ಟಿಯಲ್ಲೂ ಈ ಎರಡು ಸಂಸ್ಥೆಗಳನ್ನು ಸೇರಿಸಲಾಗಿತ್ತು. ವಿದೇಶದಿಂದ ಬರುವ ಹಲವು ಪ್ರಯಾಣಿಕರಿಗೆ ಕ್ವಾರಂಟೈನ್ ಸೆಂಟರ್ ಗಳ ಪಟ್ಟಿಯಲ್ಲಿ ದಾರುಲ್ ಇರ್ಷಾದ್ ಮತ್ತು ಅಲ್ ಮದೀನಾ ಇರುವುದನ್ನು ಕಂಡು ಈ ಎರಡೂ ಸಂಸ್ಥೆಗಳ ಆಡಳಿತದೊಂದಿಗೆ ಸಂಪರ್ಕಿಸಿ ಮಾಹಿತಿ ಕೋರಿದ್ದರು.
ಈ ವಿವರವನ್ನು ಜಿಲ್ಲಾಡಳಿತಕ್ಕೂ ತಿಳಿಸಲಾಗಿತ್ತು. ರಂಝಾನ್ ತಿಂಗಳಾದ್ದರಿಂದ ಬರುವ ಪ್ರಯಾಣಿಕರ ಆಹಾರದ ವೇಳಾಪಟ್ಟಿಯಲ್ಲಿನ ಬದಲಾವಣೆಯ ಬಗ್ಗೆಯೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು.
ಆದರೆ ಜಿಲ್ಲಾಡಳಿತ ಯಾವುದೇ ನೋಡಲ್ ಅಧಿಕಾರಿಗಳನ್ನು ಈ ಸಂಸ್ಥೆಗಳಿಗೆ ಇನ್ನೂ ನೇಮಕ ಮಾಡದಿರುವುದರಿಂದ ಮುಂದಿನ ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗೆ ಈ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ತಿಳಿಸಿದ್ದರು.
ಯು.ಎ.ಇ ಯಿಂದ ಆಗಮಿಸಿದ ಅನೇಕ ಪ್ರಯಾಣಿಕರು ಮತ್ತು ಅವರ ಸಂಬಂಧಿಕರು ವಿಮಾನ ನಿಲ್ದಾನದ ಅನಾನುಕೂಲಗಳ ಬಗ್ಗೆ ತಡರಾತ್ತಿಯಲ್ಲೂ ಮಾಹಿತಿ ನೀಡುತ್ತಿದ್ದರು. ಕೂಡಲೇ ಈ ಎಲ್ಲಾ ಮಾಹಿತಿಗಳನ್ನು ವಿಮಾನ ನಿಲ್ದಾಣದಲ್ಲಿದ್ದ ಅಧಿಕಾರಿಗಳ ಗಮನಕ್ಕೆ ನೀಡಿ ಮಂಜಾನೆ 4 ಗಂಟೆಯವರೆಗೂ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಂವಹನ ನಡೆಸಲಾಗಿದೆ.
ವಿಮಾನ ನಿಲ್ದಾನಕ್ಕೆ ಮತ್ತು ಕ್ವಾರಂಟೈನ್ ಸೆಂಟರ್ ಗಳಿಗೆ ಹೋಗಲು ಯಾರಿಗೂ ಪ್ರವೇಶ ನೀಡದ ಹಿನ್ನಲೆಯಲ್ಲಿ ಸಂಘಟನೆಯ ಸ್ವಯಂ ಸೇವಕರ ಸೇವೆಯನ್ನು ನೀಡಲು ಸಾಧ್ಯವಾಗಿಲ್ಲ. ಆದರೂ ಮುಂಜಾನೆ ನಾಲ್ಕು ಗಂಟೆಯ ಹೊತ್ತಲ್ಲೂ ಬೇರೆ ಬೇರೆ ಸಂಘಟನೆಗಳ ಪ್ರತಿನಿಧಿಗಳ ಜೊತೆ ಪ್ರಯಾಣಿಕರ ಕುಂದು ಕೊರತೆ ನೀಗಿಸಲು ಪ್ರಯತ್ನಿಸಲಾಗಿದೆ.
ವಿದೇಶದಿಂದ ಆಗಮಿಸುವ ಅನಿವಾಸಿಗಳಲ್ಲಿ ಅನೇಕರಿಗೆ ಆರ್ಥಿಕ ಸಮಸ್ಯೆ ಇರುವುದರಿಂದ ಯಾರಿಂದಲೂ ಕ್ವಾರಂಟೈನ್ ಗಾಗಿ ಹಣ ವಸೂಲಿ ಮಾಡಬಾರದೆಂದು ಮುಸ್ಲಿಂ ಜಮಾಅತ್ ನಿನ್ನೆಯೇ ಸರಕಾರಕ್ಕೆ ಮನವಿ ಮಾಡಿತ್ತು. ಸರಕಾರವೂ ಕೂಡ ಸಕರಾತ್ಮಕವಾಗಿ ಸ್ಪಂದಿಸುವ ಬರವಸೆ ನೀಡಿತ್ತು.
ನಿನ್ನೆ ರಾತ್ರಿ ಮಂಗಳೂರು ವಿಮಾನ ನಿಲ್ದಾನದಲ್ಲಿ ಅನಿವಾಸಿ ಕನ್ನಡಿಗರಿಗಾದ ತೊಂದರೆ ಮತ್ತು ಜಿಲ್ಲಾಡಳಿತ ಕರ್ತವ್ಯ ಲೋಪದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಕಛೇರಿಗೂ ದೂರು ನೀಡಲಾಗಿದೆ. ಇಂದು ಜಿಲ್ಲಾಡಳಿತದೊಂದಿಗೆ ಸಂಘಟನೆಯ ಪ್ರತಿನಿಧಿಗಳು ಮಾತುಕತೆ ನಡೆಸಲಿದ್ದು, ಹೋಟೇಲ್ ಗಳ ಹಣ ಪಾವತಿಸಲು ಕಷ್ಟವಾಗುವ ಪ್ರಯಾಣಿಕರಿಗೆ ಉಚಿತವಾಗಿ ಈ ಸೌಲಭ್ಯಗಳನ್ನು ನೀಡಲು ಒತ್ತಾಯಿಸಲಿದೆ.
ಮುಂದಿನ ದಿನಗಳಲ್ಲಿ ಮಂಗಳೂರು ವಿಮಾನ ನಿಲ್ದಾನಕ್ಕೆ ಇನ್ನಷ್ಟು ವಿಮಾನಗಳು ಬರಲಿದ್ದು ನಿನ್ನೆಯ ಘಟನೆಯಿಂದ ವಿದೇಶದಲ್ಲಿರುವ, ಊರಿಗೆ ಬರಲು ಉದ್ದೇಶಿಸಿರುವ ಅನಿವಾಸಿಗಳು ಗಾಬರಿಗೊಳಗಾಗಿದ್ದು ಅವರ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇನ್ನೂ ಹೆಚ್ಚಿನ ವ್ಯವಸ್ಥೆಗಳನ್ನು ಪ್ರಕಟಿಸಬೇಕೆಂದು ಮುಸ್ಲಿಂ ಜಮಾಅತ್ ಆಗ್ರಹಿಸುತ್ತದೆ. ಅಗತ್ಯವೆನಿಸಿದರೆ ಜಿಲ್ಲಾಡಳಿತ ವಿವಿಧ ಸಂಘಟನೆಗಳ ಸ್ವಯಂ ಸೇವಕರ ಸೇವೆಯನ್ನು ಪಡಯಬೇಕೆಂದೂ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ನಾಡಿನ ಅಭ್ಯುದಯದ ಹಿಂದೆ ಅನಿವಾಸಿಗಳ ಶ್ರಮ ಅಪಾರ. ಬಡವರ, ಅನಾಥರ, ಮಸೀದಿ- ಮಂದಿರಗಳ, ಸಂಸ್ಥೆಗಳ ಪುರೋಗಮನದ ಹಿಂದೆ ಈ ಅನಿವಾಸಿಗಳ ಬೆವರ ಹನಿಗಳಿವೆ. ನಾಡಿನ ಆರ್ಥಿಕ ಅಭಿವೃದ್ಧಿಯ ಹಿಂದೆಯೂ ಅನಿವಾಸಿಗಳಿದ್ದಾರೆ.
ಈಗ ಅನಿವಾಸಿಗಳು ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟದಲ್ಲಿ ಭಾಗಿಯಾಗಬೇಕಾದದ್ದು, ಅವರ ಜೊತೆ ನಿಲ್ಲಬೇಕಾದದ್ದು ನಮ್ಮ ಧರ್ಮ. ಅನಿವಾಸಿಗಳ ಸೌಕರ್ಯಕ್ಕಾಗಿ ಹಲವು ಸಂಸ್ಥೆಗಳು ತಮ್ಮ ಸಂಸ್ಥೆಗಳನ್ನು ಕ್ವಾರಂಟೈನ್ ಗಾಗಿ ಬಿಟ್ಟುಕೊಡಲು ಸಿದ್ದವಿದೆಯೆಂದು ಮುಸ್ಲಿಂ ಜಮಾಅತ್ ಗೆ ತಿಳಿಸಿವೆ. ಅವುಗಳ ವಿವರಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗುವುದು.
ಅಲ್ಲಿ ಉಚಿತ ವಸತಿ ಮತ್ತು ಆಹಾರ ನೀಡುವ ಬಗ್ಗೆಯೂ ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು. ಸಂಘಟನೆಯ ಅಂಬುಲೆನ್ಸ್, ಸ್ವಯಂ ಸೇವಕರು ಎಲ್ಲವನ್ನೂ ಬಳಸಿಕೊಳ್ಳುವ ಬಗ್ಗೆ ಮುಸ್ಲಿಂ ಜಮಾಅತ್ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮುಸ್ಲಿಂ ಜಮಾಅತ್ ಪ್ರ. ಕಾರ್ಯದರ್ಶಿ ಶಾಫಿ ಸಅದಿ, ಕಾರ್ಯದರ್ಶಿಗಳಾದ ಹಮೀದ್ ಬಜ್ಪೆ, ಅಶ್ರಫ್ ಕಿನಾರ ಮುಂದಿನ ದಿನಗಳಲ್ಲಿ ವಿದೇಶದಿಂದ ಆಗಮಿಸುವ ಅನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಅವರನ್ನು ಸ್ವೀಕರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದೆಂದು ಪ್ರಕಟನೆಯಲ್ಲಿ ತಿಳಿಸಿದೆ.