janadhvani

Kannada Online News Paper

ಮಸೀದಿಯಲ್ಲಿ ಇಮಾಮತ್ ನಿಲ್ಲಲು ಕಲಿತ ಯುವಕ ಇಂದು ಯುವ ವಕೀಲ!

✍️ಶಾಫಿ ಅದಿ ಬೆಂಗಳೂರು

ಸ್ಥಾಪಕ ದಿನದ ಸಂಭ್ರಮದಲ್ಲಿರುವ ಎಸ್ಸೆಸ್ಸಫ್ ಸಮುದಾಯಕ್ಕೆ ಸಮರ್ಪಿಸಿದ ಪ್ರತಿಭೆಗಳು ಅಪಾರ.

ಅದು ಬಿಜಾಪುರ ಪಟ್ಟಣಕ್ಕೆ ತಾಗಿಕೊಂಡಿರುವ ಒಂದು ಹಳ್ಳಿ. ಗುಲ್ಬರ್ಗಾ ಜಿಲ್ಲಾ ಸಮಿತಿಯ ಒಂದು ಸಮಾವೇಶಕ್ಕೆ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಒತ್ತಡದಲ್ಲಿದ್ದ ರಾಜ್ಯ ಎಸ್ಸೆಸ್ಸಫ್ ನಾಯಕರಿಗೆ ಮಧ್ಯಾಹ್ನದ ಆಹಾರದ ವ್ಯವಸ್ಥೆಯನ್ನು ಮಾಡಿದ್ದು ಈ ಹಳ್ಳಿಯ ಯುವಕ.

ಊಟಕ್ಕೆ ಮುಂಚೆ ಳುಹ್ರ್ ನಮಾಝ್ ಮುಗಿಸೋಣ ಎಂದು ಹತ್ತಿರದ ಮಸೀದಿಗೆ ಭೇಟಿ ನೀಡಿದೆವು. 20/25 ಮಂದಿ ಮಸೀದಿಯಲ್ಲಿದ್ದರು. ಇಮಾಮರ ಆಗಮನಕ್ಕೆ ಕಾಯುತ್ತಿದ್ದರು ಅಲ್ಲಿನ ಜನ. ಶುಭ್ರ ವಸ್ತ್ರಧಾರಿಯಾಗಿ ಬಂದ ಯುವಕನೊಬ್ಬ ಇಮಾಂ ಆಗಿ ನಿಂತು ಜಮಾಅತ್ ಪೂರೈಸಿದ. ಬಳಿಕ ತಿಳಿಯಿತು.

ಆತ ಎಸ್ಸೆಸ್ಸೆಫ್ ನ ದಾಇಗಳ ನಿರಂತರ ತರಗತಿಗಳಿಗೆ ಹಾಜರಾಗಿ ಧಾರ್ಮಿಕ ವಿದ್ಯಾಭ್ಯಾಸ ಕಲಿತು ಈಗ ಇಮಾಮತ್ ಆಗಿ ನಮಾಝ್ ನಿರ್ವಹಿಸುವ ಹಂತಕ್ಕೆ ಬೆಳೆದು ನಿಂತಿದ್ದಾನೆಂದು.

ಬಳಿಕ 10 ನಿಮಿಷ ದೀನೀ ತರಗತಿ ನಡೆಸಿ, ನಮ್ಮನ್ನು ಆ ಹಳ್ಳಿ ಜನತೆಗೆ ಪರಿಚಯಿಸಿದನು. ಆ ಸಂದರ್ಭದಲ್ಲಿ
70 ವರ್ಷದ ವಯಸ್ಕನೊಬ್ಬ ಹೇಳಿದ ಮಾತು ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ. ‘ಈ ಹುಡುಗನಿಂದ ನಾವು ನಮಾಜ್ ಕಲಿತೆವು.

ನಮ್ಮ ಮಕ್ಕಳಿಗೆ ಕುರ್ ಆನ್ ಮತ್ತು ಇಂಗ್ಲೀಷ್ ಕಲಿಸುತ್ತಾನೆ’. ತುಂಬ ಹೆಮ್ಮೆ ಎನಿಸಿತು. ಇಂತಹ ಸಾವಿರ ಸಾವಿರ ಮಕ್ಕಳನ್ನು ರಾಜ್ಯಕ್ಕೆ ಕೊಡುಗೆ ನೀಡಿದ ಸಂಘಟನೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದ ನಾವೂ ಧನ್ಯರು.

ಆ ದಿನ ಊಟಕ್ಕೆ ಮನೆಯ ಅಂಗಳದಲ್ಲಿ ಚಾಪೆ ಹಾಕುವಾಗ ಆ ಹುಡುಗನ ಹೆತ್ತಬ್ಬೆ ತುಂಬಾ ಮಾತನಾಡುತ್ತಿದ್ದರು. ನಮಗೆ ಜಾಸ್ತಿ ಆ ತಾಯಿಯ ಮಾತಿಗೆ ಗಮನ ಕೊಡಲು ಆಗುತ್ತಿರಲಿಲ್ಲ. ಕಾರಣ 10 ನಿಮಿಷ ಮುಂಚೆ ಮಂಗಳೂರಿನಿಂದ ಸ್ನೇಹಿತರಾದ ಅಝೀಝ್ ದಾರಿಮಿ ಕರೆಮಾಡಿ ಒಂದು ಸ್ಪೋಟಕ ಮಾಹಿತಿ ನೀಡಿದ್ದರು.

( ಇ.ಕೆ ವಿಭಾಗದ ಸಮಸ್ತದ ಮದ್ರಸಾದಲ್ಲಿ ದೇಶದ್ರೋಹದ ಪಾಠ ಹೇಳಿಕೊಡಲಾಗುತ್ತದೆ ಎಂದು ಎಸ್ಸೆಸ್ಸಫ್ ಕಾರ್ಯಕರ್ತನೊಬ್ಬ ವಕೀಲನ ಮೂಲಕ ಉಚ್ಛ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ. ನಂತರ ನಾವು ಅದರ ತನಿಖೆ ಮಾಡಿಸಿದ್ದು ಮಾತ್ರವಲ್ಲ, ಎಸ್ಸೆಸ್ಸಫ್ ಕಾರ್ಯಕರ್ತರು ಯಾರೂ ಅಂತಹ ಹೇಳಿಕೆ ಕೊಟ್ಟಿಲ್ಲ ಎಂಬುವುದು ರಾಜ್ಯದ ಜನತೆಗೆ ಮನವರಿಕೆಯೂ ಆಯಿತು.)
ನಾವು ಆ ವಿಚಾರದ ತನಿಖೆಯಲ್ಲಿ ಜಾಸ್ತಿ ತಲೆಕೆಡಿಸಿಕೊಂಡಿದ್ದೆವು. ಆ ತಾಯಿಯ ಮಾತಿನಲ್ಲಿ ಮಗನ ಬಗ್ಗೆ ಅಪಾರವಾದ ನಿರೀಕ್ಷೆ ಇತ್ತು.

ಅದರೊಂದಿಗೆ ಎಸ್ಸೆಸ್ಸಫ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇ ಮಗನ ಬದಲಾವಣೆಗೆ ಕಾರಣ ಕಂಡಿದ್ದಳು. ಒಂದು ಮಾತು ನಮ್ಮೆಲ್ಲರನ್ನೂ ತಾಯಿಯ ಮಾತಿನತ್ತ ಗಮನಹರಿಸುವಂತೆ ಮಾಡಿತು.

” ಮೇರಾ ಬೇಟಾ ಆಲಿಂ ಆರ್ ವಕೀಲ್ ಬನ್ನಾ ಹೇ” ಆಪ್ ಮದದ್ ಕರೋ, ದುವಾ ಬಿ ಕರೋ.
ಊಟ ಮುಗಿಸಿ ನಾವು ಗುಲ್ಬರ್ಗಕ್ಕೆ ಹೊರಟೆವು. ನಮ್ಮೊಂದಿಗೆ ಬಿಜಾಪುರದ ಮುಖ್ಯ ರಸ್ತೆಯ ತನಕ ಒಟ್ಟಿಗೆ ಬಂದ ಆ ಹಳ್ಳಿ ಹುಡುಗ ನಮ್ಮನ್ನು ಬೀಳ್ಕೊಟ್ಟು ಆತನ ಸಂಧ್ಯಾ ಕಾಲೇಜ್ ಗೆ ಹೊರಟ.

ಎರಡು ತಿಂಗಳ ಹಿಂದೆ ವಕ್ಫ್ ಬೋರ್ಡಿನ ಲೀಗಲ್ ಸೆಲ್ ಅಧಿಕಾರಿಗಳೊಂದಿಗೆ ಹಾವೇರಿಯ ಲ್ಯಾಂಡ್ ಎಂನ್ಕ್ರೋನ್ಚ್ ಮೆಂಟ್ಬ land encroachment ಬಗ್ಗೆ ಚರ್ಚೆ ನಡೆಸುತ್ತಿದ್ದೆ.

ಹುಬ್ಬಳ್ಳಿ ಧಾರವಾಡದ ವಿಭಾಗೀಯ ನ್ಯಾಯಾಲಯದ ಇಬ್ಬರು ಯುವ ವಕೀಲರು ಸದ್ರಿ ಕೇಸು ಬಗ್ಗೆ ಹಾಜರಾಗಿದ್ದರು.
ಇಬ್ಬರಲ್ಲಿ ಒಬ್ಬ ಬಿಜಾಪುರದ ಆ ಹಳ್ಳಿ ಹುಡುಗನಾಗಿದ್ದ.
ಮನೆಯ ಮತ್ತು ಹಳ್ಳಿಯ ಸಮಾಚಾರ ತಿಳ್ಕೊಂಡೆ. ಈಗಲೂ ಮಗ್ರಿಬ್ ಮತ್ತು ಇಶಾಃ ನಮಾಝಿಗೆ ಇಮಾಮತ್ ಇದೆ ಯುವ ವಕೀಲನಂತೆ!

ಅಲ್ ಹಮ್ದುಲಿಲ್ಲಾಹ್!!
47 ವರ್ಷ ಪೂರೈಸುತ್ತಿರುವ ಎಸ್ಸೆಸ್ಸಫ್ ಇಂತಹ ಅದೆಷ್ಟೋ ಹಳ್ಳಿ ಹುಡುಗರನ್ನು ಸಮುದಾಯದ ಮುಖ್ಯವಾಹಿನಿಗೆ ತಂದಿದೆ ಎಂಬ ಇತಿಹಾಸ ತಿರುವಿದಾಗ ನನಗೆ ಗೊತ್ತಿಲ್ಲದೆ ನನ್ನ ಮನ ಪಿಸುಗುಟ್ಟಿತು ” ನೀನು ಒಬ್ಬ ಎಸ್ಸೆಸ್ಸಫ್ ಕಾರ್ಯಕರ್ತ ಎಂದು” ಎಸ್ಸೆಸ್ಸಫ್ ಗೆ 47 ರ ಜನುಮ ದಿನ ಮಾತ್ರವಲ್ಲ, ದೇಶದ ಕನಿಷ್ಠ 47000 ಯುವಕರನ್ನಾದರೂ ಸಮಾಜ ಮತ್ತು ಸಮುದಾಯದ ನಾಯಕರನ್ನಾಗಿ ಬೆಳೆಸಲು ಸಾಧ್ಯವಾದ ದೇಶದ ಧಾರ್ಮಿಕ ಚಲಳುವಳಿಯ ಮುಂಚೂಣಿ ಸಂಘಟನೆ.

error: Content is protected !! Not allowed copy content from janadhvani.com