ಬೆಂಗಳೂರು: ಇಲ್ಲಿನ ಪಾದರಾಯನಪುರದಲ್ಲಿ ನಡೆದ ಅಹಿತರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಅಮಾಯಕ ಮುಸ್ಲಿಮರಿಗೆ ನೀಡುತ್ತಿರುವ ಕಿರುಕುಳವನ್ನು ಕೊನೆಗೊಳಿಸಬೇಕು ಮತ್ತು ಕೊರೋನ ನಿಗ್ರಹಿಸುವ ನಿಟ್ಟಿನಲ್ಲಿ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ಒತ್ತಾಯಿಸಿದ್ದಾರೆ.
ಕೊರೋನ ವಿರುದ್ಧದ ಕಾರ್ಯಾಚರಣೆ ವೇಳೆ ಪಾದರಾಯನಪುರದಲ್ಲಿ ನಡೆದ ಅಹಿತಕರ ಘಟನೆ ಖಂಡನಾರ್ಹವಾಗಿದೆ. ಕೊರೋನ ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾದ ಪಾದರಾಯನಪುರ ಪ್ರದೇಶದಿಂದ ಜನರನ್ನು ಕ್ವಾರಂಟೈನ್ಗೊಳಪಡಿಸಲು ಕರೆದೊಯ್ಯುವ ವೇಳೆ ಅಲ್ಲಿನ ಜನರಿಗೆ ಯಾವುದೇ ಮುನ್ಸೂಚನೆಯಾಗಲೀ, ಮಾಹಿತಿಯನ್ನಾಗಲೀ ನೀಡಲಾಗಿರಲಿಲ್ಲ ಎಂದು ಹೇಳಲಾಗಿದೆ. ಸ್ಥಳೀಯ ಶಾಸಕರನ್ನು ಕರೆಯಿಸಿ ಆತಂಕವನ್ನು ದೂರ ಮಾಡಬೇಕೆಂಬ ಅಲ್ಲಿನ ಜನರ ಅಹವಾಲನ್ನೂ ಈ ಸಂದರ್ಭದಲ್ಲಿ ತಿರಸ್ಕರಿಸಲಾಗಿತ್ತು.
ನಂತರ ನಡೆದ ಅಹಿತಕರ ಘಟನೆಯನ್ನು ವರ್ಣರಂಜಿತವಾಗಿ ತೋರಿಸಲಾಯಿತು.ಆದರೆ ಇದೀಗ 121 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ಬಂಧಿತರಲ್ಲಿ ಬಹುತೇಕ ಮಂದಿ ಅಮಾಯಕರು ಎಂದು ಹೇಳಲಾಗಿದೆ.
ಬಂದಿತರಲ್ಲೋರ್ವ ಭಾರತೀಯ ರೆಡ್ ಕ್ರಾಸ್ ಸದಸ್ಯನಾಗಿದ್ದು,ಕೋರೋನ ಸೈನಿಕನಾಗಿ ಇದೇ ಪ್ರದೇಶದಲ್ಲಿ ಪ್ರತಿನಿತ್ಯ 200 ಮಂದಿಗೆ ಆಹಾರ ವಿತರಿಸುತ್ತಿದ್ದು, ಪತ್ನಿಯೊಂದಿಗೆ ತಪಾಸಣೆಗಾಗಿ ವೈದ್ಯರ ಭೇಟಿ ಮಾಡಿದ ಸಂದರ್ಭದಲ್ಲಿ ಬಂಧಿಸಲಾಗಿದೆ.
ಆದರೆ ರಾಜ್ಯಾದ್ಯಂತ ತೀವ್ರ ಚರ್ಚೆಗೀಡಾದ ಈ ಘಟನೆಯಲ್ಲಿ, ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿಲ್ಲ ಎಂಬ ವಿಚಾರವನ್ನು ಈಗಾಗಲೇ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬಳಿಕ ಪೊಲೀಸರು ಘಟನಾಸ್ಥಳದ ಆಸುಪಾಸಿನ ಪ್ರದೇಶಗಳಿಗೂ ದಾಳಿ ನಡೆಸಿ ಸೀಲ್ಡೌನ್ ನಿಂದಾಗಿ ಮನೆಯಲ್ಲೇ ಉಳಿದಿರುವ ಅಮಾಯಕರನ್ನೂ ಉಟ್ಟ ಉಡುಗೆಯಲ್ಲಿ ಬಂಧಿಸಿ ಕೊಂಡೊಯ್ದಿದ್ದಾರೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ ಆದರೆ ಅಮಾಯಕರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಜೊತೆಗೆ ನ್ಯಾಯಾಂಗ ಬಂಧನದಲ್ಲಿರುವವರ ಪೈಕಿ ಕೆಲವರ ಕೋರೋನ ವರದಿ ಪೊಸಿಟಿವ್ ಬಂದಿದ್ದು, ಈ ನಿಟ್ಟಿನಲ್ಲಿ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ನಾಸಿರ್ ಪಾಷ ಒತ್ತಾಯಿಸಿದ್ದಾರೆ.