janadhvani

Kannada Online News Paper

ಗಲ್ಫ್ ರಾಷ್ಟ್ರಗಳಲ್ಲೂ ಸಂವಿಧಾನ ಸಂರಕ್ಷಣೆಯ ಕೂಗು… ಕೆಸಿಎಫ್ ಬಹ್ರೈನ್ ಪೌರ ಸಮ್ಮಿಲನ ಜನಸಾಗರ

✍ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ…

ಮೊನ್ನೆ ರಾತ್ರಿ ಬಹ್ರೈನ್‌ಗೆ ತಲುಪಿದೆ. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಜಮಾಲಾಕ ವಿಟ್ಲರವರ ನೇತೃತ್ವದಲ್ಲಿರುವ ದೊಡ್ಡ ತಂಡವೇ ಏರ್‌ಪೋರ್ಟಿಗೆ ಬಂದಿತ್ತು. ಅರ್ಧರಾತ್ರಿಯಲ್ಲಿ ನಡುಗುವ ಚಳಿಯಲ್ಲೂ ಅವರೆಲ್ಲಾ ಬಂದು ನಿಂತದ್ದು ಕಂಡು ತುಂಬಾ ಸಂತೋಷವಾಯಿತು.

ಯಾರು ಬಂದರೂ ಜೊತೆಯಲ್ಲೇ ಇರುವ ಸನ್ಮಿತ್ರ ಕಲಂದರ್ ಶರೀಫ್ ಕಕ್ಕೆಪದವು, ಕೆಸಿಎಫ್ ಬಹ್ರೈನ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿ, ಮನ್ಸೂರ್ ಬೆಳ್ಮ, ಅಬ್ದುರ್ರಝಾಖ್ ಆನೆಕ್ಕಲ್, ಅಬ್ದುಲ್ ಖಾದರ್ ಆನೆಕ್ಕಲ್, ಫಝಲ್ ಸುರತ್ಕಲ್, ಅಬ್ದುರ್ರಶೀದ್ ಈಶ್ವರಮಂಗಲ, ಇಹ್ಸಾನ್ ಆರ್ಗನೈಝರ್ ಮುಹಮ್ಮದ್ ವೇಣೂರು ಎಲ್ಲರೂ ಜೊತೆಯಲ್ಲಿದ್ದರು. ಫಝಲ್ ಸುರತ್ಕಲ್ ರವರ ಫ್ಲಾಟ್ ಅಲ್ಲಿಗೆ ಬರುವ ಎಲ್ಲಾ ನಮ್ಮ ಉಲಮಾಗಳಿಗೂ ಒಂದು ಅಭಯಕೇಂದ್ರವಿದ್ದಂತೆ. ವಿಶಾಲವಾದ ಫ್ಲಾಟ್‌ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು.

ಎಲ್ಲಾ ಕಡೆಯಂತೆ ಇಲ್ಲಿಯೂ ಕೆಸಿಎಫ್ ತುಂಬಾ ಚುರುಕಾಗಿ ಕಾರ್ಯಾಚರಿಸುತ್ತಿದೆ. ಪುಟ್ಟ ರಾಷ್ಟ್ರವಾದರೂ ಕೂಡ ಐದಾರು ಸೆಕ್ಟರ್‌ಗಳು ಸುಮಾರು ಐನೂರಕ್ಕೂ ಮಿಕ್ಕ ಸದಸ್ಯರು ಇಲ್ಲಿನ ಕೆಸಿಎಫ್ ನಲ್ಲಿದ್ದಾರೆ.‌
ಉತ್ತರ ಕರ್ನಾಟಕದ ಚಿತ್ರದುರ್ಗದ ಬೆಂಗಳೂರು-ಪೂಣೆ ಹೈವೆಯ ಪಕ್ಕದಲ್ಲಿ ಸೀಬಾರ್ ಎಂಬ ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ ಸುಮಾರು ಒಂದೂವರೆ ಕೋಟಿ ವೆಚ್ಚದ ಬೃಹತ್ ಇಹ್ಸಾನ್ ಸೆಂಟರ್ ಈ ಬಹ್ರೈನ್ ಕೆಸಿಎಫ್‌ನ ಕೊಡುಗೆ! ಅದರ ಕಾಮಗಾರಿ‌ಗಳು ಬಹುತೇಕ ಪೂರ್ಣಗೊಂಡಿದ್ದು ಇಂಶಾಅಲ್ಲಾಹ್ ಶೀಘ್ರದಲ್ಲೇ ಉದ್ಘಾಟನೆ ಗೊಳ್ಳಲಿದೆ. ಅಲ್ಲದೆ ಚಿತ್ರದುರ್ಗದಲ್ಲಿ ಇಹ್ಸಾನ್ ದಾಈಗಳಾದ MSM ಜುನೈದ್ ಸಖಾಫಿ ಹಾಗೂ ಅಬ್ದುಲ್ ಖಾದರ್ ಸಖಾಫಿಯವರ ದಅವಾ ಕಾರ್ಯಾಚರಣೆಯ ಬೆನ್ನೆಲುಬು ಕೂಡ ಈ ಬಹ್ರೈನ್ ಕೆಸಿಎಫ್. ಅಲ್ಲಾಹು ಎಲ್ಲವನ್ನೂ ಖಬೂಲ್ ಮಾಡಲಿ-ಆಮೀನ್.

ನಾನಿಲ್ಲಿ ಒಂದ ಬಳಿಕ ಮೊದಲ ಕಾರ್ಯಕ್ರಮವೆಂದರೆ ಮೊನ್ನೆ ರಾತ್ರಿ ಅದ್ದೂರಿಯಾಗಿ ನಡೆದ ‘ಪೌರ ಸಮ್ಮಿಲನ’. ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಿತ ಪೌರತ್ವ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂಬ ಕೂಗು ಜಗತ್ತಿನಾದ್ಯಂತ ಕೇಳಿ ಬರುತ್ತಿದೆ. ದೇಶದ ಸಂವಿಧಾನ ವಿರೋಧಿಯಾದ ಈ ಕಾಯ್ದೆಯನ್ನು ವಿರೋಧಿಸಿ ಕೆಸಿಎಫ್ ಗಲ್ಫ್ ರಾಷ್ಟ್ರಗಳಾದ್ಯಂತ ಪೌರ ಸಮ್ಮಿಲನಕ್ಕೆ ಕರೆ ಕೊಟ್ಟಿದೆ. ಅದರಂತೆ ಬಹ್ರೈನ್ ಕೆಸಿಎಫ್ ವತಿಯಿಂದ ಮೊನ್ನೆ ನಡೆದ ಕಾರ್ಯಕ್ರಮ ನಿರೀಕ್ಷೆಗೂ ಮೀರಿದ ಜನಸಾಗರದೊಂದಿಗೆ ಯಶಸ್ವಿಯಾಗಿತ್ತು.

ಉತ್ತರ ಭಾರತದ ಅಲೀಘರ್ ನಿವಾಸಿಗಳಾದ ಕೆಲವರು ಕೂಡ ಭಿತ್ತಿಪತ್ರಗಳನ್ನು ಹಿಡಿದುಕೊಂಡೇ ಕಾರ್ಯಕ್ರಮಕ್ಕೆ ಹಾಜರಾಗಿದ್ದರು! ಕನ್ನಡ ಮಲಯಾಳಂ ಇಂಗ್ಲಿಷ್ ಹಿಂದಿ ಭಾಷೆಗಳಲ್ಲಿರುವ ವಿವಿಧ ಭಾಷಣಗಳು ನಿಜವಾದ ಭಾರತದ ವೈವಿಧ್ಯತೆಯನ್ನು ಎತ್ತಿ ತೋರಿಸುವಂತಿತ್ತು! ಧರ್ಮ ಜಾತಿ ಭಾಷೆ ಸಂಘಟನೆಗಳ ವ್ಯತ್ಯಾಸವಿಲ್ಲದೆ ಜನಸೇರಿದ್ದು ಇದು ಕೇವಲ ಮುಸ್ಲಿಮರ ಮಾತ್ರ ಸಮಸ್ಯೆಯಲ್ಲ ಎಂಬುವುದಕ್ಕೆ ಸಾಕ್ಷಿಯಾಗಿತ್ತು!! ಈ ವಿಷಯದಲ್ಲಿ ಅತಿಶೀಘ್ರವಾಗಿ ಎಚ್ಚೆತ್ತುಕೊಂಡು ಇಷ್ಟು ದೊಡ್ಡ ಕಾರ್ಯಕ್ರಮವನ್ನು ಸಂಘಟಿಸಿದ ಕೆಸಿಎಫ್ ನಾಯಕರಿಗೆ ಉತ್ತರ ಭಾರತದ ಮಿತ್ರರು ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಾ ನಿಮ್ಮ ಕೆಸಿಎಫ್‌ನ ಯಾವ ಕಾರ್ಯಕ್ರಮವಿದ್ದರೂ ತಪ್ಪದೆ ತಿಳಿಸಿ ಎಂದು ಹೇಳಿಹೋದರು. ಅಲ್ ಹಂದುಲಿಲ್ಲಾಹ್…

ಧರ್ಮ ಜಾತಿ ಭಾಷೆಗಳ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ಇಂಥಹಾ ಆರೋಗ್ಯಕರ ಸೆಮಿನಾರ್‌ಗಳ ಮೂಲಕ ದೇಶ-ವಿದೇಶಗಳಲ್ಲಿರುವ ಭಾರತೀಯರಿಗೆ ಇದರ ಭೀಕರ ಭವಿಷ್ಯದ ಬಗ್ಗೆ ಅರಿವು ಮೂಡಿಸುವುದು ಸದ್ಯದ ಅಗತ್ಯವಾಗಿದೆ. ಹಲವರಿಗೆ ಈ ವಿಷಯದಲ್ಲಿ ತುಂಬಾನೇ ಕನ್‌ಫ್ಯೂಷನ್ಸ್ ಇದೆ. ದಿನದಿಂದ ದಿನಕ್ಕೆ ಬರುತ್ತಿರುವ ಹಲವು ವ್ಯತ್ಯಸ್ಥ ವರದಿಗಳು ಇದರ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುವವರನ್ನೂ ಗಲಿಬಿಲಿ ಮಾಡುತ್ತಿದೆ. ಆದ್ದರಿಂದಲೇ ಈ ಬಗ್ಗೆ ಆಳ ಅರಿವುಳ್ಳ ಪ್ರಬುದ್ಧರಿಂದ ನಾಡಿನ ಜನತೆಗೆ ಸ್ಪಷ್ಟವಾದ ಅರಿವು ಮೂಡಿಸುವುದು ತುಂಬಾನೇ ಅಗತ್ಯವಿದೆ. ಈ ಬಗ್ಗೆ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿದೆ.

✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
📲 +973 38753162
ವಾಟ್ಸಪ್ : +91 9164630384

error: Content is protected !! Not allowed copy content from janadhvani.com