janadhvani

Kannada Online News Paper

ಕೇಂದ್ರ ಸರಕಾರವು’ದ್ವಿರಾಷ್ಟ್ರ ಸಿದ್ಧಾಂತ’ ವನ್ನು ಅನುಷ್ಠಾನಗೊಳಿಸಲು ಮುಂದಾಗಿದೆ

ನವದೆಹಲಿ: ಮೊಹಮ್ಮದ್ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರಧಾನಿ ನರೇಂದ್ರ ಮೋದಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಜಾವೇದ್ ಅಲಿ ಖಾನ್ ಟೀಕಿಸಿದರು.

ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ‘ಪೌರತ್ವ (ತಿದ್ದುಪಡಿ) ಮಸೂದೆ’ ಮೇಲೆ ರಾಜ್ಯಸಭೆಯಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷಗಳ ಸಂಸದರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಧರ್ಮದ ಆಧಾರದಲ್ಲಿ ದೇಶಕಟ್ಟುವುದನ್ನು ಒಪ್ಪಲಾಗದು. ಕೇಂದ್ರ ಸರ್ಕಾರವು ದೇಶವನ್ನು ಮುಸ್ಲಿಂ ಮುಕ್ತ ಮಾಡಲು ಹೊರಟಿದೆ ಎಂದೂ ಎಸ್‌ಪಿ ಆರೋಪಿಸಿದೆ.

ಈ ಮಸೂದೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಯ ಮೇಲೆ ಬರೆಯಲಾಗುತ್ತಿಲ್ಲ. ಪಾಕಿಸ್ತಾನದ ರಾಷ್ಟ್ರಪಿತ ಮೊಹಮ್ಮದ್ ಜಿನ್ನ ಅವರ ಸಮಾಧಿಯ ಮೇಲೆ ಬರೆಯಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟೀಕಿಸಿದೆ. ಈ ಸರ್ಕಾರ ಭರವಸೆಗಳನ್ನು ನೀಡುವಲ್ಲಿ ಉತ್ತಮವಾಗಿದೆ. ಅದೇ ರೀತಿ ಭರವಸೆಗಳನ್ನು ಈಡೇರಿಸದೇ ಇರುವಲ್ಲಿ ಇನ್ನಷ್ಟು ಉತ್ತಮವಾಗಿದೆ ಎಂದು ಟಿಎಂಸಿ ವ್ಯಂಗ್ಯವಾಡಿದೆ.

ಪೌರತ್ವ ಮಸೂದೆ ಬಂಗಾಳ ವಿರೋಧಿ ಮತ್ತು ಭಾರತ ವಿರೋಧಿ ನಿಲುವು ಹೊಂದಿದೆ. ಈ ಮಸೂದೆಯ ಮೂಲಕ ಭಾರತವು ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಹೊರಳುತ್ತಿದೆ ಎಂದು ಟಿಎಂಸಿ ಸಂಸದ ಡೆರಿಕ್ ಒಬ್ರೇನ್ ಹೇಳಿದ್ದಾರೆ. ಕಾಂಗ್ರೆಸ್ ಸಹ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಮಸೂದೆ ಭಾರತದ ಪರಿಕಲ್ಪನೆಯನ್ನೇ ಪ್ರಶ್ನಿಸುವಂತಿದೆ. ಅಲ್ಲದೆ, ನ್ಯಾಯವನ್ನು ನಿರಾಕರಿಸುತ್ತದೆ. ತಕ್ಷಣವೇ ಸರ್ಕಾರ ಮಸೂದೆಯನ್ನು ಹಿಂಪಡೆಯಬೇಕು ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸಂಸದ ಕೆ. ಕೇಶವ ರಾವ್ ಆಗ್ರಹಿಸಿದ್ದಾರೆ.

ಮಸೂದೆಗೆ ಸೋಮವಾರ ಲೋಕಸಭೆಯಲ್ಲಿ ಅನುಮೋದನೆ ದೊರೆತಿದ್ದು, ಇಂದು ಮಾಧ್ಯಾಹ್ನ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ. ಮಧ್ಯಾಹ್ನ ಭೊಜನ ವಿರಾಮವೂ ಇಲ್ಲದೆ ಚರ್ಚೆ ಮುಂದುವರಿದಿದೆ. ಒಟ್ಟು 6 ಗಂಟೆ ಚರ್ಚೆಗೆ ಸಮಯ ನೀಡಲಾಗಿದ್ದು, ಸಂಜೆ ಅಥವಾ ರಾತ್ರಿ ಒಳಗೆ ಮಸೂದೆಯನ್ನು ಮತಕ್ಕೆ ಹಾಕುವ ನಿರೀಕ್ಷೆ ಇದೆ.

error: Content is protected !! Not allowed copy content from janadhvani.com