ಮಂಗಳೂರು: ಇತ್ತೀಚೆಗೆ ಮಂಗಳೂರಿನ ಬೆಳ್ತಂಗಡಿ ಮೂಲದ ಅಮಾಯಕ ವ್ಯಕ್ತಿಯೊಬ್ಬರಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆಯೆಂದೂ ಎನ್‌ಐಎ ಯಿಂದ ಬಂಧನವಾಗಿದೆಯೆಂದೂ ಕಪೋಲ ಕಲ್ಪಿತ ಸುದ್ದಿಯನ್ನು ಬಿತ್ತರಿಸುವ ಮೂಲಕ ಕನ್ನಡದ ಸುದ್ದಿ ವಾಹಿನಿಗಳು ದೇಶದ ಮುಂದೆ ಬೆತ್ತಲಾಗಿವೆ. ಸಮಾಜವನ್ನು ಒಡೆಯುವ ಇಂತಹ ಸುದ್ದಿಮಾಧ್ಯಮಗಳ ವಿರುದ್ಧ ಪೋಲಿಸ್ ಇಲಾಖೆಯು ಸ್ವಯಂಪ್ರೇರಿತ ಕೇಸು ದಾಖಲಿಸಬೇಕು ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ಅಲ್ ಮದನಿ ತಂಙಳ್ ಆಗ್ರಹಿಸಿದ್ದಾರೆ.
ಇಂತಹ ಸುದ್ದಿಗಳನ್ನು ಪ್ರಕಟಿಸುವಾಗ ಪಾಲಿಸಬೇಕಾದ ಕನಿಷ್ಠ ಪ್ರಕ್ರಿಯೆಗಳನ್ನೂ ಪಾಲಿಸದೇ ಸುದ್ದಿವಾಹಿನಿಗಳು ಮಾಧ್ಯಮರಂಗಕ್ಕೇ ಅಪಚಾರ ಎಸಗಿದೆ.
ಜಿಲ್ಲೆಯ ವ್ಯಕ್ತಿಯೊಬ್ಬರ ಬಂಧನವಾಗಿದೆಯೆಂದು ಸುದ್ದಿ ಬಿತ್ತರಿಸುವಾಗ ಜಿಲ್ಲಾ ಪೋಲಿಸ್ ಮುಖ್ಯಸ್ಥರ ಹೇಳಿಕೆಯನ್ನು ಕೂಡ ಜೊತೆಯಲ್ಲಿ ಪ್ರಸಾರ ಮಾಡಬೇಕೆಂಬ ಕನಿಷ್ಠ ಜ್ಞಾನ ಕೂಡ ಈ ಪತ್ರಕರ್ತರಿಗೆ ಇಲ್ಲವಾಯಿತೇ? ವ್ಯಕ್ತಿಯೊಬ್ಬರ ಹೆಸರು ವಿಳಾಸವನ್ನು ಸಹಿತ ಉಲ್ಲೇಖಿಸಿ ಆರೋಪ ಮಾಡುವಾಗ ಆ ವ್ಯಕ್ತಿಯನ್ನು ಅಥವಾ ಅವರ ಮನೆಮಂದಿಯನ್ನು ಸಂಪರ್ಕಿಸಿ ವದಂತಿ ನಿಜವೇ ಎಂದು ದೃಢಪಡಿಸುವ ಮೂಲಕ ವರದಿಗೆ ನಿಖರತೆಯ ಸ್ಪರ್ಷ ಕೊಡಬೇಕೆಂದು ಕೂಡ ತಿಳಿಯದಷ್ಟು ಅಜ್ಞಾನಿಗಳೇ ನಮ್ಮ ಹೆಮ್ಮೆಯ ಕನ್ನಡ ನಾಡಿನ ಪತ್ರಕರ್ತರು?
ಟಿಆರ್‌ಪಿ ಹೆಚ್ಚಿಸುವುದಕ್ಕಾಗಿಯೋ ಅಥವಾ ನಿಗದಿತ ಸಮುದಾಯವೊಂದನ್ನು ಟಾರ್ಗೆಟ್ ಮಾಡುವ ದುರುದ್ದೇಶದಿಂದಲೋ ಮಾಧ್ಯಮಗಳು ಅಮಾಯಕರ ಬದುಕಿನಲ್ಲಿ ಚೆಲ್ಲಾಟವಾಡುವುದು ಅಕ್ಷಮ್ಯ.
ಮಾಧ್ಯಮಗಳಲ್ಲಿ ಬಿತ್ತರವಾದಂತೆ ಯಾವುದೇ ವ್ಯಕ್ತಿಯ ಬಂಧನವಾಗಿಲ್ಲ ಎಂದು ಜಿಲ್ಲಾ ಪೋಲಿಸ್ ವರಿಷ್ಠರು ಸ್ಪಷ್ಟೀಕರಣ ಕೊಟ್ಟ ಬಳಿಕವೂ ಯಾವುದೇ ಸುದ್ದಿ ಮಾಧ್ಯಮಗಳು ತಪ್ಪನ್ನು ಒಪ್ಪಿ ಕ್ಷಮೆ ಯಾಚಿಸಿಲ್ಲ ಯಾಕೆ? ಅಥವಾ ಸುದ್ದಿಯ ನೈಜ್ಯತೆಯನ್ನು ಪ್ರಕಟಿಸಿ ಮನನೊಂದ ಅಮಾಯಕನಿಗೆ ಧೈರ್ಯ ತುಂಬುವ ಕಾರ್ಯವನ್ನಾದರೂ ಸುದ್ದಿವಾಹಿನಿಗಳು ಮಾಡಬೇಕಿತ್ತು. ಇದ್ಯಾವುದೂ ಮಾಡದೇ ಇರುವುದರಿಂದ ಸುದ್ದಿ ಮಾಧ್ಯಮಗಳು ಪೂರ್ವಾಗ್ರಹ ಪೀಡಿತವಾಗಿಯೇ ಸುದ್ದಿ ಮಾಡಿರುವುದೆಂದು ದೃಢಪಡುತ್ತದೆ. ಆದುದರಿಂದ ಸರಕಾರವು ಇಂತ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮತ್ತು ಈ ಬಗ್ಗೆ ಆ.23 ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.