janadhvani

Kannada Online News Paper

370ನೇ ವಿಧಿ ರದ್ದು: ಭಾರತ-ಪಾಕ್ ನಡುವೆ ಯುದ್ಧ ಸಂಭವ- ಇಮ್ರಾನ್‌ ಖಾನ್‌ ಎಚ್ಚರಿಕೆ

ಇಸ್ಲಾಮಾಬಾದ್‌: ‘ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರಿಂದ ಪುಲ್ವಾಮಾ ಮಾದರಿಯ ದಾಳಿ ನಡೆದು, ಭಾರತ– ಪಾಕಿಸ್ತಾನದ ಮಧ್ಯೆ ಪೂರ್ಣಪ್ರಮಾಣದ ಯುದ್ಧ ನಡೆಯುವ ಸಂಭವ ಇದೆ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರ ವಿಚಾರವಾಗಿ ಚರ್ಚಿಸಲು ಕರೆದಿದ್ದ ವಿಶೇಷ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಈ ಯುದ್ಧದಲ್ಲಿ ಯಾರೂ ಗೆಲ್ಲಲಾರರು ಆದರೆ ಅದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಆಗಲಿದೆ’ ಎಂದಿದ್ದಾರೆ.

‘ಭಾರತದ ಕ್ರಮವನ್ನು ವಿರೋಧಿಸಿ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆಯಲಿವೆ. ಪ್ರತಿಭಟನೆ ನಡೆಸುವವರ ಮೇಲೆ ಭಾರತವು ದಾಳಿ ನಡೆಸಬಹುದು. ಇದು ಭಾರತ– ಪಾಕ್‌ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಬಹುದು. ಹೀಗಾದಾಗ ಪುಲ್ವಾಮಾ ಮಾದರಿಯ ಘಟನೆಗಳು ನಡೆದೇ ನಡೆಯುತ್ತವೆ. ಭಾರತವು ಅದರ ಆರೋಪವನ್ನು ನಮ್ಮ ಮೇಲೆ ಹೊರಿಸಿ ನಮ್ಮ ಮೇಲೆ ದಾಳಿ ನಡೆಸಬಹುದು. ಪ್ರತ್ಯುತ್ತರವಾಗಿ ನಾವೂ ದಾಳಿ ನಡೆಸಬೇಕಾಗುತ್ತದೆ. ಎರಡು ಅಣ್ವಸ್ತ್ರ ರಾಷ್ಟ್ರಗಳ ಮಧ್ಯೆ ನಡೆಯುವ ಯುದ್ಧದಲ್ಲಿ ಯಾರೂ ಗೆಲ್ಲಲಾರರು. ಆದರೆ ಪರಿಣಾಮ ಮಾತ್ರ ಜಾಗತಿಕ ಮಟ್ಟದಲ್ಲಾಗುವುದು. ನನ್ನ ಮಾತುಗಳನ್ನು ಅಣ್ವಸ್ತ್ರ ಬ್ಲ್ಯಾಕ್‌ಮೇಲ್ ಎಂದು ತಿಳಿಯಬಾರದು’ ಎಂದೂ ಖಾನ್‌ ಹೇಳಿದರು.

‘ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳತ್ತ ಅಂತರರಾಷ್ಟ್ರೀಯ ಸಮುದಾಯ ಗಮನಹರಿಸಬೇಕು. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದ ಇಮ್ರಾನ್‌, ‘ಭಾರತದ ಕ್ರಮವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಶ್ನಿಸಲಾಗುವುದು. ಅಂತರರಾಷ್ಟ್ರೀಯ ವೇದಿಕೆ ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು’ ಎಂದರು.

ಮೋದಿ ಅವರು ಮುಸ್ಲಿಂ ವಿರೋಧಿ ಕಾರ್ಯಸೂಚಿ ಜಾರಿ ಮಾಡುವ ಮೂಲಕ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ್ದಾರೆ. ಜಗತ್ತು ಈ ಕೂಡಲೇ ಭಾರತದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಾವೇ ರಚಿಸಿದ ಕಾನೂನಿಗೆ ಗೌರವ ಕೊಡದೆ ಸುಮ್ಮನೆ ಕುಳಿತರೆ ಮುಂದೆ ಸಂಭವಿಸುವ ಬೆಳವಣಿಗೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ’ ಎಂದು ಖಾನ್‌ ಎಚ್ಚರಿಕೆ ನೀಡಿದ್ದಾರೆ.

ಕ್ರಮಕ್ಕೆ ಒತ್ತಾಯ: ಭಾರತದ ಕ್ರಮಕ್ಕೆ ಪಾಕಿಸ್ತಾನ ಪರಿಣಾಮಕಾರಿ ಉತ್ತರ ನೀಡಬೇಕು ಎಂದು ಪಾಕಿಸ್ತಾನದ ವಿರೋಧಪಕ್ಷಗಳು ಖಾನ್‌ ಅವರ ಮೇಲೆ ಒತ್ತಡ ಹೇರಿವೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಖಾನ್‌, ‘ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಮೊದಲನೆಯದು ಬಚ್ಚಿಟ್ಟುಕೊಳ್ಳುವುದು, ಎರಡನೆಯದು ಪರಿಣಾಮಕಾರಿ ಕ್ರಮ ಕೈಗೊಳ್ಳುವುದು. ಮೊದಲನೆಯದನ್ನು ಆಯ್ದುಕೊಳ್ಳುವುದು ಅಸಾಧ್ಯ. ಆದ್ದರಿಂದ ಪರಿಣಾಮಕಾರಿ ಕ್ರಮ ಕೈಗೊಳ್ಳಲೇಬೇಕಾಗಿದೆ’ ಎಂದರು.

ಜಂಟಿ ಸದನ ಆರಂಭದಲ್ಲಿ ಭಾರತದ ವಿರುದ್ಧ ನಿರ್ಣಯ ಮಂಡಿಸಿದ ಆಡಳಿತ ಪಕ್ಷದವರು ‘ಗಡಿನಿಯಂತ್ರಣ ರೇಖೆಯ ಉಲ್ಲಂಘನೆ’ಯನ್ನು ಮಾತ್ರ ಪ್ರಸ್ತಾಪಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿರೋಧಪಕ್ಷಗಳವರು 370ನೇ ವಿಧಿಯನ್ನು ರದ್ದುಗೊಳಿಸಿದ ವಿಚಾರವನ್ನು ಪ್ರಸ್ತಾಪಿಸಲೇಬೇಕು ಎಂದು ಪಟ್ಟು ಹಿಡಿದರು. ಆಗ ಗೊಂದಲ ಸೃಷ್ಟಿಯಾಗಿ ಸದನವನ್ನು ಮುಂದೂಡಲಾಯಿತು.

error: Content is protected !! Not allowed copy content from janadhvani.com