ಬೀಜಿಂಗ್, ಜುಲೈ 13:-ಇರಾನ್ ವಿರುದ್ಧ ಅಮೆರಿಕದ ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಬಂಧಗಳನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೆಂಗ್, ಇರಾನ್ ಸೇರಿದಂತೆ ಜಾಗತಿಕ ಸಮುದಾಯದೊಂದಿಗೆ ಚೀನಾದ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು ಅಂತಾರಾಷ್ಟ್ರೀಯ ನಿಯಮಗಳ ಚೌಕಟ್ಟಿನಲ್ಲಿಯೇ ಇವೆ ಎಂದು ಚೀನಾ ಹಲವು ಬಾರಿ ಒತ್ತಿ ಹೇಳಿದೆ. ಇರಾನ್‌ನೊಂದಿಗಿನ ಚೀನಾದ ಸಾಮಾನ್ಯ ಸಂಬಂಧಗಳು ತಾರ್ಕಿಕ ಮತ್ತು ಕಾನೂನುಬದ್ಧವಾಗಿವೆ ಮತ್ತು ಅದನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯನ್ನು ರಕ್ಷಿಸಲು ಅಮೆರಿಕ ಮೈತ್ರಿಕೂಟದೊಂದಿಗೆ ಚೀನಾ ಪಾಲ್ಗೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪರ್ಷಿಯನ್ ಕೊಲ್ಲಿ ಪ್ರದೇಶ ಅಂತಾರಾಷ್ಟ್ರೀಯ ಇಂಧನ ಪೂರೈಕೆ ಮತ್ತು ಜಾಗತಿಕ ಭದ್ರತೆಗೆ ಹೆಚ್ಚು ಮಹತ್ವದ್ದಾಗಿದೆ. ಅಶಾಂತಿ ಉಲ್ಬಣಗೊಳ್ಳುವುದನ್ನು ತಡೆಯಲು ದೃಢವಾದ ಕ್ರಮಗಳನ್ನುಎಲ್ಲ ದೇಶಗಳು ತೆಗೆದುಕೊಳ್ಳಬೇಕಾಗಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವ ಸಮುದಾಯ ಗಮನ ಹರಿಸುತ್ತದೆ ಎಂದು ಚೀನಾ ಭಾವಿಸುತ್ತದೆ ಎಂದು ಅವರು ಹೇಳಿದರು.