ದೋಹಾ: ಭಾರತ ಸಹಿತ ವಿಶ್ವದಾದ್ಯಂತ ಕಾರ್ಯಾಚರಿಸುವ ಖತರ್ ವಿಸಾ ಸೆಂಟರ್‌ಗಳಲ್ಲಿ ಹೆಚ್ಚಿನ ಸೇವೆಗಳನ್ನು ನೀಡಲು ಖತರ್ ಗೃಹಖಾತೆ ಮುಂದಾಗಿದೆ.
ಮನೆ ಕೆಲಸದವರು, ಮನೆ ಚಾಲಕ ಮುಂತಾದ ಗೃಹ ವಿಸಾಗಳಲ್ಲಿ ಕೆಲಸ ನಿರ್ವಹಿಸಲಿರುವವರ ವಿಸಾ ಕ್ರಮಗಳನ್ನು ಇದೇ ಸೆಂಟರ್‌ಗಳ ಮೂಲಕ ಪೂರ್ಣಗೊಳಿಸ ಬಹುದಾಗಿದೆ.
ಖತರ್‌ನಲ್ಲಿ ಕೆಲಸ ಲಭಿಸುವವರ ವಿಸಾ ಕ್ರಮಗಳನ್ನು ತಮ್ಮ ಹುಟ್ಟೂರಲ್ಲೇ ಪೂರ್ಣಗೊಳಿಸುವ ಉದ್ದೇಶದಿಂದ ವಿವಿಧ ದೇಶಗಳಲ್ಲಿ ಖತರ್ ವಿಸಾ ಸೇವಾ ಕೇಂದ್ರಗಳನ್ನು ತೆರೆದಿದೆ.
ಭಾರತದಲ್ಲಿನ ಸೇವಾ ಕೇಂದ್ರದಲ್ಲಿ ಹೆಚ್ಚಿನ ಸೇವೆ ಲಭ್ಯವಾಗಲಿದ್ದು, ಪ್ರಸಕ್ತ ಖಾಸಗಿ ವಲಯ ಮತ್ತು ಅರ್ಧ ಸರಕಾರಿ ಸ್ಥಾಪನೆಗಳಿಗೆ ರಿಕ್ರೂಟ್ ಮಾಡಲ್ಪಡುವವರ ವಿಸಾ ಕ್ರಮಗಳನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ, ಇದೀಗ ಗೃಹ ಸಂಬಂಧಿತ ವಿಸಾಗಳಿಗೂ ಈ ಕೇಂದ್ರಗಳ ಮೂಲಕ ಸೇವೆ ನೀಡಲು ಖತರ್ ತಯಾರಾಗಿದೆ.
ಇದಕ್ಕೆ ಬೇಕಾಗುವ ಕ್ರಮೀಕರಣಗಳು ಪ್ರಗತಿಯಲ್ಲಿದೆ ಎಂದು ಖತರ್ ವಿಸಾ ಸೇವಾ ವಿಭಾಗದ ಡೈರೆಕ್ಟರ್ ಅಬ್ದುಲ್ಲ ಖಲೀಫಾ ಅಲ್ ಮುಹನ್ನದಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಸಾ ಸಂಬಂಧಿತ ಬೆರಳಚ್ಚು, ಆರೋಗ್ಯ ತಪಾಸಣೆ ಮುಂತಾದ ಎಲ್ಲಾ ಕ್ರಮಗಳೂ ಕ್ಯುವಿಸಿ ಮೂಲಕ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಜನಾರೋಗ್ಯ ಸಚಿವಾಲಯದ ಮುಂದಾಳುತ್ವದಲ್ಲಿ ಸೆಂಟರ್‌ಗಳಲ್ಲಿ ಆರೋಗ್ಯ ತಪಾಸಣೆ ನಡೆಯಲಿದ್ದು, ಅಂಗೀಕರಿಸುವ ಉಸ್ತುವಾರಿಯನ್ನು ವಿದೇಶಾಂಗ ಸಚಿವಾಲಯ ವಹಿಸಲಿದೆ.
ಖಾಸಗಿ ವಲಯದ ಅನಿವಾಸಿ ಕಾರ್ಮಿಕರಿಗಾಗಿ 30,000 ಕ್ಕಿಂತಲೂ ಹೆಚ್ಚಿನ ವಿಸಾಗಳನ್ನು ಈ ಮೂಲಕ ಅನುಮತಿಸಲಾಗಿದೆ. ಭಾರತದಲ್ಲಿ ಕೊಚ್ಚಿನ್, ಮುಂಬೈ ಸಹಿತ ಏಳು ಕಡೆಗಳಲ್ಲಿ ಇಂತಹ ಕೇಂದ್ರಗಳು ಕಾರ್ತಾಚರಿಸುತ್ತಿದೆ.