janadhvani

Kannada Online News Paper

ಶ್ರೀಲಂಕಾ ಮಸೀದಿ ಮೇಲೆ ದಾಳಿ- ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ನಿಷೇಧ

ಕೊಲಂಬೋ: ಶ್ರೀಲಂಕಾ ತಾತ್ಕಾಲಿಕವಾಗಿ ಫೇಸ್ಬುಕ್ ಮತ್ತು ವಾಟ್ಸಪ್ ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ಜಾಲಗಳನ್ನು ನಿಷೇಧಿಸಿದೆ.ಈಸ್ಟರ್ ದಿನದಂದು ಸಂಭವಿಸಿದ ಬಾಂಬ್ ದಾಳಿಯ ನಂತರ ಮಸೀದಿ ಹಾಗೂ ಮುಸ್ಲಿ ವ್ಯಾಪಾರಿಗಳ ಮೇಲೆ ದಾಳಿಗಳು ನಡೆದ ಹಿನ್ನಲೆಯಲ್ಲಿ ಈಗ ಶ್ರೀಲಂಕಾ ಈ ಕ್ರಮವನ್ನು ತೆಗೆದುಕೊಂಡಿದೆ.

ದೇಶದಲ್ಲಿ ಶಾಂತಿ ಸ್ಥಾಪನೆಗೆ ಇದೊಂದು ತಾತ್ಕಾಲಿಕ ಕ್ರಮವಾಗಿದೆ ಎಂದು ಸರಕಾರದ ಮಾಹಿತಿ ಇಲಾಖೆಯ ಮಹಾನಿರ್ದೇಶಕರು ಹೇಳಿದ್ದಾರೆ. ಶ್ರೀಲಂಕಾದ ಪ್ರಮುಖ ಮೊಬೈಲ್ ಫೋನ್ ಆಪರೇಟರ್ ಡೈಲಾಗ್ ಟ್ವೀಟ್ ಮಾಡಿ ತನಗೆ ಫೇಸ್ ಬುಕ್, ಟ್ವಿಟರ್ ಹೊರತಾಗಿ ವೈಬರ್, ಐಎಂಒ, ಸ್ನ್ಯಾಪ್ ಚ್ಯಾಟ್, ಇನ್‍ಸ್ಟಾಗ್ರಾಂ ಹಾಗೂ ಯುಟ್ಯೂಬ್ ಅನ್ನು ಮುಂದಿನ ಆದೇಶದ ತನಕ ನಿಷೇಧಿಸುವಂತೆ ಸೂಚನೆ ದೊರಕಿದೆ ಎಂದು ಹೇಳಿದೆ.

ರವಿವಾರ ಪಶ್ಚಿಮ ಶ್ರೀಲಂಕಾದ ಕ್ರೈಸ್ತ ಬಾಹುಳ್ಯದ ಚಿಲಾವ್ ಪಟ್ಟಣದಲ್ಲಿ ಹಲವಾರು ಮಸೀದಿಗಳು ಹಾಗೂ ಮುಸ್ಲಿಮರ ಮಳಿಗೆಗಳ ಮೇಲೆ ದಾಳಿ ನಡೆದು ಒಬ್ಬ ವ್ಯಕ್ತಿಯನ್ನು ಥಳಿಸಲಾಗಿತ್ತು. ಫೇಸ್ ಬುಕ್ ನಲ್ಲಿ ಆರಂಭಗೊಂಡ ಜಗಳವೊಂದು ಈ ದಾಳಿಗಳಲ್ಲಿ ಪರ್ಯವಸಾನಗೊಂಡಿದೆ ಎಂದು ಹೇಳಲಾಗಿದೆ.

ಈ ಘಟನೆಗಳ ಸಂಬಂಧ ನೆರೆಯ ಕುರುನೇಗಲ ಜಿಲ್ಲೆಯ ಕೆಲ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಫೇಸ್ ಬುಕ್ ನಲ್ಲಿ ವಿವಾದಾತ್ಮಕ ಪೋಸ್ಟ್ ಬರೆದುಕೊಂಡಿರುವ ಅಬ್ದುಲ್ ಹಮೀದ್ ಮೊಹಮದ್ ಹಸ್ಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಮಿಲಿಟರಿ ವಕ್ತಾರ ಸುಮಿತ್ ಅಟ್ಟಪಟ್ಟು ಮಾತನಾಡುತ್ತಾ, ಹೆಚ್ಚಾಗಿ ಬೌದ್ಧ ಜಿಲ್ಲೆಯ ಜನರು ಬಂಧಿತ ವ್ಯಕ್ತಿಯ ಬಿಡುಗಡೆಗೆ ಒತ್ತಾಯಿಸಿದ್ದಾರೆ.”ಪರಿಸ್ಥಿತಿಯನ್ನು ನಿಯಂತ್ರಿಸಲು, ರಾತ್ರಿಯ ವೇಳೆ ಪೊಲೀಸ್ ಕರ್ಫ್ಯೂ ವಿಧಿಸಲಾಗಿದೆ” ಎಂದು ಅಟ್ಟಪಟ್ಟು ಹೇಳಿದರು.

ಈಗ ದಾಳಿಯಲ್ಲಿ ಹಲವಾರು ಮಸೀದಿಗಳು ಮತ್ತು ಮುಸ್ಲಿಂ ಮನೆಗಳು ಹಾನಿಗೀಡಾಗಿವೆ ಎಂದು ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್ ಹೇಳಿದೆ ಆದರೆ ನಿಖರವಾದ ಹಾನಿ ಮತ್ತು ಬಂಧಿಸಿರುವವರ ಸಂಖ್ಯೆಯು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

error: Content is protected !! Not allowed copy content from janadhvani.com