ನವದೆಹಲಿ, ಏಪ್ರಿಲ್ 23: 2002ನೇ ಇಸವಿಯಲ್ಲಿ ಗುಜರಾತ್ ಹಿಂಸಾಚಾರ ನಡೆದ ವೇಳೆ 21 ವರ್ಷದ ಬಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದರು. ಅವರಿಗೆ ಗುಜರಾತ್ ಸರಕಾರ 50 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಮಂಗಳವಾರದಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ವಾಸಿಸಲು ನೆಲೆಯಿಲ್ಲದೆ 2002ರಿಂದ ಆಕೆ ಅಲೆಮಾರಿ ಜೀವನ ನಡೆಸುತ್ತಿರುವುದನ್ನು ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.
ಬಲ್ಕಿಸ್ ಬಾನುಗೆ ಸರಕಾರಿ ಉದ್ಯೋಗ ಹಾಗೂ ವಸತಿಯನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ದಾಹೋದ್ ಎಂಬ ಹಳ್ಳಿಯ ನಿವಾಸಿಯಾದ ಬಲ್ಕಿಸ್ ಯಾಕೂಬ್ ರಸೂಲ್ ಗೋಧ್ರೋತ್ತರ ಹಿಂಸಾಚಾರದಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದರು. ಆಕೆಯ ಮೂರು ವರ್ಷದ ಮಗುವನ್ನು ಕೊಲ್ಲಲಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ 2008ರಲ್ಲಿ 11 ಮಂದಿಗೆ ಶಿಕ್ಷೆಯಾಗಿತ್ತು.
ಕಳೆದ ಮಾರ್ಚ್ ನಲ್ಲಿ ಆಕೆಗೆ ಐದು ಲಕ್ಷ ರುಪಾಯಿ ಪರಿಹಾರ ನೀಡಲು ಗುಜರಾತ್ ಸರಕಾರ ಮುಂದಾಗಿತ್ತು. ಅದನ್ನು ಆಕೆ ನಿರಾಕರಿಸಿದ್ದರು. “ಸರಕಾರದಿಂದ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಆದರೆ ಸಂತ್ರಸ್ತೆ ಮೇಲೆ ನಡೆದ ಮಾನವನ ಕ್ರೌರ್ಯಕ್ಕೆ ಕುಗ್ಗಿ ಹೋಗಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಲ್ಕಿಸ್ ಬಾನುರ ಮೂರು ವರ್ಷದ ಮಗಳನ್ನು ಕೊಲ್ಲಲಾಗಿದೆ. ಆ ನಂತರ ಆಕೆ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಎನ್ ಜಿಒಗಳ ದಾನದಿಂದ ಬದುಕುತ್ತಿದ್ದಾರೆ. ಆಕೆಗೆ ಈಗ ನಲವತ್ತು ವರ್ಷ ವಯಸ್ಸು. ಶಿಕ್ಷಣ ಕೂಡ ಇಲ್ಲ. ತನ್ನ ಇಡೀ ಕುಟುಂಬವನ್ನು ಕಳೆದುಕೊಂಡಿದ್ದಾರೆ ಎಂದು ಸಹ ಹೇಳಿದೆ.
ಸಂತ್ರಸ್ತೆಗೆ ಪರಿಹಾರ ಸಿಗಬೇಕು ಎಂಬ ವಿಚಾರದಲ್ಲಿ ನಾವು ಕಾನೂನಿನ ನಿಯಮ- ಸಿದ್ಧಾಂತಗಳನ್ನು ಹುಡುಕುವ ಅಗತ್ಯವಿಲ್ಲ. ಸಂತ್ರಸ್ತೆ ಅನುಭವಿಸಿದ ನಷ್ಟವನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರದ ಪ್ರಮಾಣ ಘೋಷಿಸಬೇಕಿದೆ ಎಂದಿದೆ.