ಸೌತ್ ಕೆರೊಲಿನ: ಉಬರ್ ಟ್ಯಾಕ್ಸಿ ಎಂದು ತಪ್ಪಾಗಿ ಭಾವಿಸಿ ಕಾರೊಂದಕ್ಕೆ ಹತ್ತಿದ ಕಾಲೇಜು ವಿದ್ಯಾರ್ಥಿನಿ ದಾರುಣವಾಗಿ ಕೊಲೆಯಾದ ಘಟನೆ ಅಮೆರಿಕದ ಉತ್ತರ ಕೆರೊಲಿನದಲ್ಲಿ ಶುಕ್ರವಾರ ನಡೆದಿದೆ.
ಸಮಂತ ಜೋಸಫ್‌ಸನ್ (21) ಕೊಲೆಯಾದ ಯುವತಿ. ಘಟನೆಗೆ ಸಂಭವಿಸಿ ಆರೋಪಿ ನತಾನಿಯಲ್ ರೋಲೆಂಡ್ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ತುಂಬಾ ಹೊತ್ತಾದರೂ ಸಮಂತಾ ಪತ್ತೆಯಾಗದ ಕಾರಣ ಆಕೆಯ ಗೆಳೆಯರು ಆಕೆಗಾಗಿ ಹುಡುಕಾಡಿದ್ದಾರೆ. ಈ ವೇಳೆ ಕೊಲಂಬಿಯಾದ ಒಂದು ಬಾರ್‌ನಲ್ಲಿ ಆಕೆ ಕೊನೆಯ ಬಾರಿ ಕಾಣಿಸಿಕೊಂಡಿದ್ದಾಗಿ ತಿಳಿದುಬಂತು. ಅನಂತರ ನಡೆದ ತನಿಖೆಯಲ್ಲಿ ಸಮಂತಳ ಮೃತದೇಹ ನಿರ್ಜನವಾದ ಬಯಲಿನಲ್ಲಿ ಪತ್ತೆಯಾಗಿದೆ.
ಕಳೆದ ಶುಕ್ರವಾರ ಕೊಲಂಬಿಯಾದ ಫೈವ್ ಪಾಯಿಂಟ್ಸ್ ಬಾರಲ್ಲಿ ತನ್ನ ಗೆಳೆಯರೊಂದಿಗೆ ಕಳೆದ ಬಳಿಕ ಸಮಂತ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಳು. ನತಾನಿಯಲ್ ರೋಲೆಂಡ್ ಎಂಬಾತನ ಕಪ್ಪು ಕಾರನ್ನು ಕಂಡ ಸಮಂತ ಉಬರ್ ಟ್ಯಾಕ್ಸಿ ಎಂದು ಭಾವಿಸಿ ಕೈ ತೋರಿಸಿದ್ದಾಳೆ. ಕಾರು ನಿಲ್ಲಿಸಿದಾಗ ಸಮಂತ ಕಾರಿಗೆ ಹತ್ತಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾಳೆ. ಬಳಿಕ ಆರೋಪಿಯು ಆಕೆಯ ಮೇಲೆ 14 ಗಂಟೆಗಳ ಕಾಲ ಲೈಂಗಿಕ ಹಿಂಸೆ ನಡೆಸಿದ್ದು, ಇದರಿಂದ ಸಮಂತ ಸಾವನ್ನಪ್ಪಿದ್ದಾಳೆ.ರವಿವಾರ ಬೆಳಗ್ಗೆ ಆರೋಪಿಯದ್ದೆಂದು ಹೇಳಲಾದ ಕಾರನ್ನು ಪೊಲೀಸರು ಪತ್ತೆಹಚ್ಚಿದ್ದು, ಕಾರಿನ ಡಿಕ್ಕಿಯಲ್ಲಿ ರಕ್ತದ ಕಲೆಗಳಿರುವುದು ಕಂಡುಬಂದಿದೆ. ಇದು ಸಮಂತಳದ್ದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಪದವಿ ಪೂರ್ತಿಗೊಳಿಸಿ ಕಾನೂನು ಅಧ್ಯಯನಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗಲೇ ಸಮಂತ ಅತಿ ಕ್ರೂರವಾಗಿ ಕೊಲೆಯಾಗಿದ್ದಾಳೆ. ಆಕೆಯ ಕುತ್ತಿಗೆ, ಮುಖ ಹಾಗೂ ಕಾಲಲ್ಲಿ ಆಳವಾದ ಗಾಯಗಳಿದ್ದವು. ಸಿಸಿ ಟಿವಿ ದೃಶ್ಯಗಳಿಂದ ಸಮಂತ ಪ್ರಯಾಣಿಸಿದ ಕಾರಿನ ಬಗ್ಗೆ ಪೊಲೀಸರಿಗೆ ವಿವರಗಳು ಲಭಿಸಿವೆ. ಕಾರಿನಲ್ಲಿದ್ದ ನತಾಲಿಯನ್‌ನ ಗೆಳತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈತನ ಕೈಯಿಂದ ಗಾಂಜಾ ವಶಪಡಿಸಿಕೊಂಡಿದ್ದಾಗಿ ಕೊಲಂಬಿಯ ಪೊಲೀಸ್ ಅಧಿಕಾರಿ ಜೆನಿಫರ್ ತೋಂಸನ್ ಹೇಳಿದ್ದಾರೆ.
ತನ್ನ ಮಗಳ ಸಾವಿನ ಬಗ್ಗೆ ಆಕೆಯ ತಂದೆ ಬರೆದ ಸಾಮಾಜಿಕ ಜಾಲತಾಣದಲ್ಲಿನ ಬರೆಹ ಕಣ್ಣೀರು ತರಿಸುವಂತಿದೆ. ”ನನಗೆ ನನ್ನ ಮಗಳು ನಷ್ಟವಾದಳು. ಅತಿಯಾದ ಹೃದಯ ವೇದನೆಯಿಂದ ನಾನಿದನ್ನು ಬರೆಯುತ್ತಿದ್ದೇನೆ. ನನ್ನ ಕೊನೆಯುಸಿರಿನವರೆಗೂ ನಾನವಳನ್ನು ಪ್ರೀತಿಸುತ್ತೇನೆ.” ಎಂದು ಅವರು ಬರೆದುಕೊಂಡಿದ್ದಾರೆ.
”ನನ್ನ ಮಗಳು ಕೊನೆಯದ್ದಾಗಿ ನೋಡಿದ ಮುಖ ಆ ಕೊಲೆಗಾರನದ್ದಾಗಿರಬಹುದು. ಅದು ನನ್ನಲ್ಲಿ ಅತ್ಯಂತ ಹೆಚ್ಚು ಅಸ್ವಸ್ಥತೆ ಹಾಗೂ ಭಯವನ್ನುಂಟುಮಾಡಿದೆ. ನನ್ನ ಮಗಳ ಹೆಸರು ಕೂಡ ಆತನಿಗೆ ಗೊತ್ತಿರಲಿಲ್ಲ. ಇನ್ನು ಯಾವ ಮಗುವಿಗೂ ಇಂತಹ ಪರಿಸ್ಥಿತಿ ಬರಬಾರದು…” ಎಂದು ಸಮಂತಳ ತಾಯಿ ಮಾರ್ಸಿ ಜೋಸಫ್‌ಸನ್ ನ್ಯಾಯಾಲಯದಲ್ಲಿ ಕಣ್ಣೀರು ಹಾಕಿದ್ದಾರೆ.
ಸಮಂತ ಕೊಲೆಯಾದ ಬೆನ್ನಲ್ಲೇ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಬೀದಿಗಳಲ್ಲಿ ಪ್ರತಿಭಟನೆ ಹಾಗೂ ಸಮಂತಳಿಗಾಗಿ ಪ್ರಾರ್ಥನೆಗಳು ನಡೆದಿವೆ.