ನವದೆಹಲಿ: ಭಾರತ ಮತ್ತು ಪಾಕ್ ನಡುವೆ ಕಳೆದ ಎರಡು ದಿನಗಳಿಂದ ಏರ್ಪಟ್ಟಿದ್ದ ವಿಷಮ ಪರಿಸ್ಥಿತಿಯಿಂದಾಗಿ ಸ್ಥಗಿತಗೊಳಿಸಲಾಗಿದ್ದ ಸಂಜೋತಾ ಎಕ್ಸ್ಪ್ರೆಸ್ ರೈಲು ಸೇವೆಗೆ ನಾಳೆ ಮರುಚಾಲನೆ ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ಅವರನ್ನು ಪಾಕ್ ಬಿಡುಗಡೆ ಮಾಡಿದ ಒಂದು ದಿನದ ನಂತರ ರೈಲ್ವೆ ಇಲಾಖೆ ಈ ಆದೇಶ ಹೊರಡಿಸಿದೆ. ಮೊದಲ ರೈಲು ಭಾರತದಿಂದ ಮಾರ್ಚ್ 3ಕ್ಕೆ ಹೊರಡಲಿದೆ. ಫೆಬ್ರವರಿ 26ರಂದು ಭಾರತ ಪಾಕ್ ಪ್ರದೇಶದ ಮೇಲೆ ವಾಯು ದಾಳಿ ನಡೆಸಿದ ನಂತರ ರೈಲು ಸೇವೆಯನ್ನು ರದ್ದು ಮಾಡಿತ್ತು. ಭಾರತ ಕೂಡ ಫೆಬ್ರವರಿ 28ರಂದು ಸಂಜೋತಾ ಎಕ್ಸ್ಪ್ರೆಸ್ ರೈಲು ಸೇವೆಯನ್ನು ರದ್ದು ಮಾಡಿತ್ತು.
ರೈಲು ಸೇವೆ ನಾಳೆ ಮೊದಲು ಭಾರತ ಕಡೆಯಿಂದಲೇ ಆರಂಭಗೊಳ್ಳಲಿದೆ. ಸೋಮವಾರ ಪಾಕಿಸ್ತಾನದ ರೈಲು ಸೇವೆ ಲಾಹೋರ್ನಿಂದ ಆರಂಭಗೊಳ್ಳಲಿದೆ. ಭಾರತದ ಕಡೆಯ ರೈಲು ದೆಹಲಿಯಿಂದ ಅಟ್ಟಾರಿಗೆ ಹಾಗೂ ಪಾಕಿಸ್ತಾನದ ಕಡೆಯಿಂದ ಲಾಹೋರ್ನಿಂದ ವಾಘಾಗೆ ರೈಲು ಸೇವೆ ಪುನಾರಂಭಗೊಳ್ಳಲಿವೆ. ಲಾಹೋರ್ನಿಂದ ಸೋಮವಾರ ಮತ್ತು ಗುರುವಾರ ರೈಲು ಹೊರಡಲಿದೆ.
1971ರಲ್ಲಿ ಎರಡು ದೇಶಗಳ ನಡುವೆ ನಡೆದ ಶಿಮ್ಲಾ ಒಪ್ಪಂದ ನಂತರ 1976ರ ಜುಲೈ 22ರಂದು ಎರಡು ದೇಶಗಳ ನಡುವೆ ಮೊದಲ ಬಾರಿಗೆ ಸಂಜೋತಾ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಲಾಗಿತ್ತು.