ಉಡುಪಿ: ಪಾಕಿಸ್ತಾನ್ ಝಿಂದಾಬಾದ್ ಎನ್ನುತ್ತಾ ಮಲ್ಪೆ ಬೀಚ್‌ಗೆ ಬಾಂಬ್ ಹಾಕುವುದಾಗಿ ಹೇಳಿಕೆ ನೀಡಿದ ಯುವಕನೊಬ್ಬನ ವಿಡಿಯೋ ಬೆನ್ನತ್ತಿದ ಪೊಲೀಸರು ಮಲ್ಪೆ ತೊಟ್ಟಂ ಬಾಜಲ್ ಬಾರ್ ಬಳಿಯ ನಿವಾಸಿ ಶೇಖರ್ ಎಂಬವರ ಪುತ್ರ ಸೃಜನ್ ಪೂಜಾರಿ(18) ಎಂಬ ಯುವಕನನ್ನು ಶನಿವಾರ ಬಂಧಿಸಿದ್ದಾರೆ.
ಯುವಕನ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಉಡುಪಿ ಎಸ್‌ಪಿ ನಿಶಾ ಜೇಮ್ಸ್ ತುರ್ತು ವಿಶೇಷ ತಂಡ ರಚಿಸಿ ಕಾರ್ಯಚರಣೆಗೆ ನಿರ್ದೇಶನ ನೀಡಿದರು.
ಅದರಂತೆ ಪೊಲೀಸರು ವಿಡಿಯೋ ಹರಡಿದ ಬಗ್ಗೆ ಒಬ್ಬೊಬ್ಬರ ವಿಚಾರಣೆ ನಡೆಸಿ ಸೃಜನ್‌ನನ್ನು ಬಂಧಿಸಿದ್ದಾರೆ. ತಾನೆ ವಿಡಿಯೋ ಮಾಡಿ, ಮೊಬೈಲ್‌ಗೆ ಅಪ್‌ಲೋಡ್ ಮಾಡಿದ್ದಾಗಿ ಯುವಕ ಹೇಳಿದ್ದಾನೆ. ಮನೆಯಲ್ಲಿ ನನಗೆ ಯಾವಾಗಲು ಬೈಯುತ್ತಿರುತ್ತಾರೆ ಅದಕ್ಕೆ ಹೀಗೆ ಮಾಡಿದ್ದೇನೆ ಎಂದು ಹೇಳಿದ್ದಾಗಿ ತಿಳಿದು ಬಂದಿದೆ.
ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ವಿಡಿಯೋ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ್ ಝಿಂದಾಬಾದ್ ಎನ್ನುತ್ತಾ ಭಾರತೀಯರನ್ನು ಅವಾಚ್ಯವಾಗಿ ನಿಂದಿಸುವ ಯುವಕ, ನಮ್ಮ ಮುಂದಿನ ಗುರಿ ಮಲ್ಪೆ ಎಂದು ಹೇಳಿದ್ದಾನೆ. ಮಲ್ಪೆ ಬೀಚ್‌ಗೆ ಬಾಂಬ್ ಹಾಕಲಾಗುವುದು. ಅಂಗಡಿಗಳೆಲ್ಲ ನಾಶವಾಗುತ್ತದೆ ನೋಡುತ್ತಿರಿ ಎಂದು ಯುವಕ ಮುಖಕ್ಕೆ ಬಟ್ಟೆ ಸುತ್ತಿಕೊಂಡು ವಿಡಿಯೋದಲ್ಲಿ ಹೇಳಿಕೆ ನೀಡಿದ್ದ. ತಂದೆ, ತಾಯಿ, ಅಕ್ಕನೊಂದಿಗೆ ಯುವಕ ವಾಸವಿದ್ದಾನೆ.
ಪೊಲೀಸರು ಯುವಕನ ಮೊಬೈಲ್ ಮತ್ತು ಮುಖಕ್ಕೆ ಸುತ್ತಿಕೊಂಡ ಟವೆಲ್‌ನ್ನು ವಶಪಡಿಸಿಕೊಂಡಿದ್ದಾರೆ.
ಡಿಬೇಟ್ ಚಾನಲ್ ಮೌನವೇಕೆ?
ಆರೋಪಿ ಯಾರೇ ಆಗಲಿ ಕಾನೂನಡಿಯಲ್ಲಿ ಶಿಕ್ಷೆ ಲಭಿಸಲೇ ಬೇಕು,ಅದು ಪೂಜಾರಿಯಾದರೂ, ಅಫ್ಝಲ್ ಆದರೂ,ಜೋಸೆಫ್ ಆದರೂ ಸರಿ.ಭಾರತ ಯಾವುದೇ ಧರ್ಮದವರಿಗೆ ಸೀಮಿತವಲ್ಲ, ಇದು ಜಾತ್ಯಾತೀತ ರಾಷ್ಟ್ರ ಎಂಬುದನ್ನು ಮರೆತು ಡಿಬೇಟ್ ನಡೆಸುವ ಮಾಧ್ಯಮಗಳು ಅರ್ಥಮಾಡಬೇಕು.
ಪಾಕಿಸ್ತಾನ್ ಝಿಂದಾಬಾದ್ ಕೂಗಿದ ವ್ಯಕ್ತಿ ಮುಸ್ಲಿಮನಾಗಿದ್ದಲ್ಲಿ, ಯಾವುದೋ ಉಗ್ರ ಸಂಘಟನೆಯ ನಂಟನ್ನು ಸ್ಥಾಪಿಸಿ ದಿನದ 24 ಗಂಟೆಯೂ ಬಾಯಿಗೆ ಬಂದಂತೆ ಚರ್ಚೆ ಸಡೆಸಲ್ಪಡುವ ದೃಶ್ಯ ಮಾಧ್ಯಮಗಳು ಈಗ ಯಾಕೆ ಮೌನ ತಾಳಿದೆ ಎಂಬ ಸಂದೇಹವು ಪ್ರೇಕ್ಷಕರಲ್ಲಿ ಉಂಟಾಗಿದೆ.
ಭಾರತದ ನೈತಿಕತೆಯಿಲ್ಲದ ಮಾಧ್ಯಮಗಳು ಜಾಗತಿಕ ಮಟ್ಟದಲ್ಲೇ ನಗೆಪಾಟಲಿಗೀಡಾಗುತ್ತಿದೆ. ಯಾವುದೋ ರಾಜಕೀಯ ಪಕ್ಷದ ಹಿತಾಸಕ್ತಿಗಾಗಿ ಮಾಧ್ಯಮಗಳು ತನ್ನ ನೈತಿಕತೆಯನ್ನು ಮರೆತು ವರ್ತಿಸುತ್ತಿದೆ ಎಂಬುದು ಬುದ್ದಿವಂತರಾದ ಭಾರತೀಯರಿಗೆ ಮನದಟ್ಟಾಗಿದೆ.
ಈ ಮಾನಸಿಕ ಅಸ್ವಸ್ಥರನ್ನು ತಯಾರುಗೊಳಿಸುವ ಕಾರ್ಖಾನೆ ಯಾರ ಒಡೆತನದಲ್ಲಿರುವುದು ಅಂತ ಗೊತ್ತಾಗಬೇಕಿದೆ.
ಅಂದು ಕಾಸರಗೋಡಿನಲ್ಲಿ ಎಂಟರ ಹರೆಯದ ಫಹದ್ ಎನ್ನುವ ಪುಟ್ಟ ಬಾಲಕನನ್ನು ಚುಚ್ಚಿ ಕೊಂದಾಗಲೂ ಕ್ಷಣಾರ್ಧದಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಾಗಿ ಗುರುತಿಸಿದ್ದ.
ಇಪ್ಪೆತ್ತರಡು ಬಡ ಹಿಂದೂ ಸಹೋದರಿಯರನ್ನು ಸಯನೈಡ್ ನೀಡಿ ಸಾಯಿಸಿದ ಮೋಹನ್ ಕುಮಾರನೂ ಮಾನಸಿಕ ಅಸ್ವಸ್ಥನಾಗಿ ಗುರುತಿಸಿದ್ದ.
ಮೈಸೂರು ದಸರಾಗೆ ಬಾಂಬ್ ಹಾವುದಾಗಿ ಲಷ್ಕರೆ ತ್ವೈಬಾ ದ ಹೆಸರಿಮಲ್ಲಿ ಇ ಮೈಲ್ ಮಾಡಿದ ಪ್ರದೀಪನೂ ಮಾನಸಿಕ ಅಸ್ವಸ್ಥನಾಗಿ ಗುರುತಿಸಿದ್ದ.
ಕರಾವಳಿಯ ಪ್ರತಿಷ್ಠಿತ ಕಾಲೇಜೊಂದಕ್ಕೆ ಮೈಲ್ ಮಾಡಿ ಬಾಂಬ್ ಹಾಕುವುದಾಗಿಯೂ, ನನ್ನ ಜೊತೆ ಇನ್ನೂ 600 ಮಂದಿ ಇದ್ದಾರೆಂದು ಹೇಳಿದ ಸತೀಶನೂ ಮಾನಸಿಕ ಅಸ್ವಸ್ಥನಾಗಿ ಗುರುತಿಸಿದ್ದ!
ಇಂತಹ ಇನ್ನಷ್ಟು ಮಾನಸಿಕ ಅಸ್ವಸ್ಥರು ಸಮಾಜದ ಸೌಹಾರ್ದತೆಗೆ ಮಾರಕವಾಗುವ ಮುನ್ನ ಸೌಹಾರ್ದ ಬಯಸುವ ಜನತೆ, ಇಲ್ಲಿನ ಕಾನೂನು ಪಾಲಕರು ಒಂದಾಗಿ ಅಂತಹ ಮಾನಸಿಕ ಅಸ್ವಸ್ಥರನ್ನು ಮಟ್ಟಹಾಕಬೇಕಾದ ಅನಿವಾರ್ಯತೆಯಿದೆ.