janadhvani

Kannada Online News Paper

ಭಾರತದಲ್ಲಿ 7.11 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ-ಸೌದಿ ದೊರೆ

ನವದೆಹಲಿ: ಭಯೋತ್ಪಾದನೆ ಮತ್ತು ಉಗ್ರವಾದ ಗಂಭೀರ ಸಮಸ್ಯೆಯಾಗಿದ್ದು, ಇವುಗಳ ವಿರದ್ಧದ ಹೋರಾಟಕ್ಕೆ ಭಾರತ ಹಾಗೂ ಇತರೆ ನೆರೆಯ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಬುಧವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಚರ್ಚೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪುಲ್ವಾಮಾ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ನಂತರ ಭಾರತ–ಪಾಕಿಸ್ತಾನದ ನಡುವೆ ಉಂಟಾಗಿರುವ ಆತಂಕದ ವಾತಾವರಣ ಹಾಗೂ ಇಸ್ಲಾಮಾಬಾದ್‌ ಭೇಟಿಯ ಬಳಿಕ ಸೌದಿ ದೊರೆ ಸಲ್ಮಾನ್‌ ಭಾರತ ಭೇಟಿಯು ಮಹತ್ವ ಪಡೆದಿದೆ.

ಭಾರತದ ಹಲವು ವಲಯಗಳಲ್ಲಿ ಮುಂದಿನ ದಿನಗಳಲ್ಲಿ ₹7.11 ಲಕ್ಷ ಕೋಟಿ ಹೂಡಿಕೆಗೆ ಅವಕಾಶವಿರುವುದು ಕಂಡುಬಂದಿದೆ. 2016ರಿಂದ ಈವರೆಗೂ ಭಾರತದಲ್ಲಿ ಸೌದಿ ಅರೇಬಿಯಾ ₹3.12 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡಿದೆ. ಪ್ರಮುಖವಾಗಿ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗಿದೆ. ಪೆಟ್ರೋಕೆಮಿಕಲ್ಸ್‌ ಹಾಗೂ ಸಂಗ್ರಹ ವಲಯದಲ್ಲಿಯೂ ಹೂಡಿಕೆ ವಿಸ್ತರಿಸುವ ಇಚ್ಛೆಯಿದೆ. ಹೂಡಿಕೆಯಿಂದಾಗಿ ಸೌದಿ ಅರೇಬಿಯಾದಲ್ಲಿರುವ ಭಾರತೀಯರು ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೌದಿ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

2016ರಲ್ಲಿ ಪ್ರಧಾನಿ ಮೋದಿ ರಿಯಾದ್‌ಗೆ ಭೇಟಿ ನೀಡಿದ್ದರು. ವ್ಯಾಪಾರ, ಹೂಡಿಕೆ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟಗಳ ಕುರಿತು ಉಭಯ ರಾಷ್ಟ್ರಗಳ ಸಹಕಾರದ ಮಾತುಕತೆ ನಡೆದಿತ್ತು. ಇದಾಗಿ ಮೂರು ವರ್ಷಗಳ ಬಳಿಕೆ ಸೌದಿ ದೊರೆ ಭಾರತಕ್ಕೆ ಭೇಟಿ ನೀಡಿದ್ದಾರೆ.

error: Content is protected !! Not allowed copy content from janadhvani.com