janadhvani

Kannada Online News Paper

ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಪಾದ್ರಿಗಳು ಮಾರಕ-ಪೋಪ್

ಪಾದ್ರಿಗಳು ಹಾಗೂ ಬಿಷಪ್‌ಗಳು ಕ್ರೈಸ್ತ ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಪೋಪ್‌ ಫ್ರಾನ್ಸಿಸ್‌ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಉಲ್ಲೇಖಿಸಿದ್ದಾರೆ. ಲೈಂಗಿಕ ದೌರ್ಜನ್ಯ ಹಗರಣವು ರೋಮನ್‌ ಕ್ಯಾಥೋಲಿಕ್‌ ಚರ್ಚೆಗೆ ಮಾರಕವಾಗಿ ಪರಿಣಮಿಸಿದೆ. 

ಮಂಗಳವಾರ ಯುಎಇ ಪ್ರವಾಸದಿಂದ ಹಿಂತಿರುಗುತ್ತಿದ್ದ ವೇಳೆ ವರದಿಗಾರರೊಂದಿಗೆ ಮಾತನಾಡಿರುವ ಪೋಪ್‌ ಫ್ರಾನ್ಸಿಸ್‌, ’ಎಲ್ಲರೂ ಈ ರೀತಿ ವರ್ತಿಸಿದ್ದಾರೆ ಎಂದಲ್ಲ, ಆದರೆ ಕೆಲವು ಪಾದ್ರಿಗಳು ಹಾಗೂ ಬಿಷಪ್‌ಗಳು ಸಹ ಇಂಥ ಕೃತ್ಯವನ್ನು ಎಸಗಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

’ತಿಳಿದ ಕೂಡಲೇ ಇದು ಅಂತ್ಯಗೊಳ್ಳುತ್ತದೆ ಎಂದು ಹೇಳಲಾಗದು. ಇಂಥದ್ದು ಮುಂದುವರಿಯುತ್ತಿವೆ. ನಾವು ಈ ಕುರಿತು ಕ್ರಮವಹಿಸಿದ್ದೇವೆ’ ಎಂದಿದ್ದಾರೆ.  

’ಪ್ರತೀಕಾರ ತೀರಿಸಿಕೊಳ್ಳುವ ಹೆದರಿಕೆಯಿಂದ ಸನ್ಯಾಸಿನಿಯರು ದಶಕಗಳಿಂದ ದೌರ್ಜನ್ಯವನ್ನು ನುಂಗಿ ಮೌನವಾಗಿದ್ದಾರೆ’ ಎಂದು ವ್ಯಾಟಿಕನ್‌ನ ಒಸರ್‌ವ್ಯಾಟೊರ್‌ ರೊಮಾನೊ ಪತ್ರಿಕೆಯ ಫೆಬ್ರುವರಿ ಪುರವಣಿಯಲ್ಲಿ ಪ್ರಕಟಿಸಲಾಗಿದೆ. ’ಚರ್ಚ್‌ ಜಗತ್ತಿನಲ್ಲಿ ಮಹಿಳೆ’ ವಿಷಯವಾಗಿ ಪುರವಣಿಯಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿರುವುದಾಗಿ ಅಲ್‌ಜಜೀರಾ ವರದಿ ಮಾಡಿದೆ. 

1990ರಲ್ಲಿ ಆಫ್ರಿಕಾದಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಪಾದ್ರಿಗಳು ನಡೆಸಿರುವ ಲೈಂಗಿಕ ದೌರ್ಜನ್ಯಗಳ ಕುರಿತು ವ್ಯಾಟಿಕನ್‌ಗೆ ವರದಿಗಳು ತಲುಪಿವೆ ಎಂದೂ ಪ್ರಸ್ತಾಪಿಸಲಾಗಿದೆ. ’ಹಗರಣದ ಬಗ್ಗೆ ಚರ್ಚ್‌ ಕಣ್ಣು ಮುಚ್ಚಿ ಕುಳಿತಿರುವುದನ್ನು ಮುಂದುವರಿಸಿದರೆ, ಸ್ಥಿತಿ ಮತ್ತಷ್ಟು ಹಾಳಾಗಲಿದೆ. ಮಹಿಳೆ ಮೇಲಿನ ನಡೆಯುವ ಲೈಂಗಿಕ ದೌರ್ಜನ್ಯವು ಅನಾಥ ಶಿಶುವಿನ ಹುಟ್ಟಿಗೆ ಕಾರಣವಾಗಬಹದು, ಒತ್ತಾಯದ ಗರ್ಭಪಾತಗಳು ಮುಂದುವರಿಯಬಹುದು– ಚರ್ಚ್‌ಗಳಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಎಂದಿಗೂ ನಿಲ್ಲದೆ ಹೋಗಬಹುದು’ ಎಂದು ಸಂಪಾದಕ ಲುಸೆಟ್ಟಾ ಸ್ಕಾರಾಫಿಯಾ ಆತಂಕ ವ್ಯಕ್ತಪಡಿಸಿದ್ದಾರೆ. 

ಲೈಂಗಿಕ ದೌರ್ಜನ್ಯ ವಿಷಯಗಳಿಗೆ ಸಂಬಂಧಿಸಿದಂತೆ ಫೆ.21 ರಿಂದ 24ರ ವರೆಗೂ ವ್ಯಾಟಿಕಲ್‌ನಲ್ಲಿ ವಿಶೇಷ ಸಭೆ ನಡೆಸಲು ಪೋಪ್‌ ತೀರ್ಮಾನಿಸಿದ್ದಾರೆ. 110 ರಾಷ್ಟ್ರಗಳ ಕ್ಯಾಥೋಲಿಕ್‌ ಬಿಷಪ್‌ಗಳನ್ನು ಹಾಜರಾಗುವಂತೆ ತಿಳಿಸಿದ್ದಾರೆ. ಧಾರ್ಮಿಕ ಮುಖಂಡರು ಹಾಗೂ ತಜ್ಞರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಬಿಷಪ್‌ಗಳು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸಭೆಯಲ್ಲಿ ನಿಯಮಗಳನ್ನು ರೂಪಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರೆಯುವ ಭರವಸೆಯನ್ನು ಕ್ರೈಸ್ತ ಸನ್ಯಾಸಿನಿಯರು ವ್ಯಕ್ತಪಡಿಸಿದ್ದಾರೆ. 

ಭಾರತದಲ್ಲಿ ಬಿಷಪ್‌ರಿಂದ ದೌರ್ಜನ್ಯ

ಬಿಷಪ್‌ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿ ಒಬ್ಬರು ಆರೋಪ ಮಾಡಿದ್ದರು. ಕಳೆದ ವರ್ಷ ಈ ಪ್ರಕರಣವು ದೇಶದಲ್ಲಿನ ಕ್ಯಾಥೋಲಿಕ್‌ ಚರ್ಚ್‌ಗಳಲ್ಲಿ ತಲ್ಲಣ ಸೃಷ್ಟಿಸಿತ್ತು. 

ಕೇರಳದಲ್ಲಿ ಬಿಷಪ್‌ ಫ್ರಾಂಕೋ ಮುಲಕ್ಕಲ್‌ ಅವರನ್ನು ಸೆಪ್ಟೆಂಬರ್‌ 21ರಂದು ಬಂಧಿಸಲಾಗಿತ್ತು. ಕ್ರೈಸ್ತ ಸನ್ಯಾಸಿನಿ ಮೇಲೆ 2014ರಿಂದ 2016ರ ವರೆಗೂ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ವಿಚಾರಣೆಗ ಒಳಪಡಿಸಲಾಗಿತ್ತು. ಬಂಧನಕ್ಕೂ ಮುನ್ನ ದಿನ ಫ್ರಾಂಕೋ ಅವರನ್ನು ಬಿಷಪ್‌ ಸ್ಥಾನದಿಂದ ಅಮಾನತುಗೊಳಿಸಿ, ನೂತನ ಬಿಷಪ್‌ ನೇಮಿಸಲಾಯಿತು. 

ಪಂಜಾಬ್‌ ಜಲಂಧರ್‌ನ ರೋಮನ್‌ ಕ್ಯಾಥೋಲಿಕ್‌ ಬಿಷಪ್‌ ಆಗಿದ್ದ ಫ್ರಾಂಕೋ ಮುಲಕ್ಕಲ್‌(53) ಆರೋಪಗಳನ್ನು ಅಲ್ಲಗಳೆದಿದ್ದರು. ಕಳೆದ ವರ್ಷ ಜೂನ್‌ನಲ್ಲಿಯೇ ಕ್ರೈಸ್ತ ಸನ್ಯಾಸಿನಿ ಫ್ರಾಂಕೊ ವಿರುದ್ಧ ಆರೋಪಿಸಿದ್ದರಾದರೂ, ಸೆಪ್ಟೆಂಬರ್‌ನಲ್ಲಿ ಪೊಲೀಸರು ವಿಚಾರಣೆ ಪ್ರಾರಂಭಿಸಿದರು. ಐವರು ಕ್ರೈಸ್ತ ಸನ್ಯಾಸಿನಿಯರು ಹಾಗೂ ಹಲವು ಬೆಂಬಲಿಗರು ಸಾರ್ವಜನಿಕ ಪ್ರತಿಭಟನೆ ನಡೆಸಿದ್ದರು. 

ಲೈಂಗಿಕ ಗುಲಾಮಗಿರಿ

ಪಾದ್ರಿಗಳ ದೌರ್ಜನ್ಯದಿಂದಾಗಿ ಹಲವು ಕ್ರೈಸ್ತ ಸನ್ಯಾಸಿನಿಯರು ಲೈಂಗಿಕ ಗುಲಾಮಗಿರಿಗೆ ಒಳಗಾಗಿರುವುದಾಗಿ ಫ್ರಾನ್ಸ್ ಮೂಲದ ವರದಿಗೆ ಸ್ಪಂದಿಸಿದ್ದ ಪೋಪ್‌ ಬೆನೆಡಿಕ್ಟ್‌ –16 ಅವರು ಸೂಕ್ತ ಕ್ರಮಕೈಗೊಂಡಿದ್ದರು ಎಂದು ಪೋಪ್‌ ಫ್ರಾನ್ಸಿಸ್ ಸ್ಮರಿಸಿದ್ದಾರೆ. 2005ರಿಂದ 2013 ರವರೆಗೂ ಅಧಿಕಾರದಲ್ಲಿದ್ದ ಪೋಪ್‌ ಬೆನೆಡಿಕ್ಟ್‌ ಅವರು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೋರುತ್ತಿದ್ದ ಧೈರ್ಯದ ಬಗ್ಗೆ ಫ್ರಾನ್ಸಿಸ್‌ ಪ್ರಸ್ತಾಪಿಸಿದ್ದಾರೆ. 

error: Content is protected !! Not allowed copy content from janadhvani.com