janadhvani

Kannada Online News Paper

ಉಮ್ರಾ ವಿಸಾಗಳಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸೇವೆ ಆರಂಭ

ರಿಯಾದ್: ಉಮ್ರಾ ಅಥವಾ ಝಿಯಾರತ್ ವಿಸಾಗೆ ನೇರವಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾದ ಸೇವೆಯನ್ನು ಹಜ್, ಉಮ್ರಾ ಸಚಿವಾಲಯ ಪ್ರಾರಂಭಿಸಿರುವುದಾಗಿ ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಸಚಿವಾಲಯದ ಅಡಿಯಲ್ಲಿನ ಆನ್‌ಲೈನ್ ಪೋರ್ಟಲ್ “ಮಖಾಮ್” ಅನ್ನು ಪರಿಷ್ಕರಿಸಿ ಆ ಮೂಲಕ ಹೊಸ ಸೇವೆಯನ್ನು ಜಾರಿಗೊಳಿಸಲಾಗಿದೆ. ಸೌದಿಯ ಏಜನ್ಸಿಗಳು ನೇರವಾಗಿ ಕಾರ್ಯಾಚರಿಸದ 157 ದೇಶಗಳ ಯಾತ್ರಾರ್ಥಿಗಳಿಗೆ ‘ಮಖಾಂ’ ಮೂಲಕ ಆನ್ ಲೈನ್‌ನಲ್ಲಿ ವೀಸಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆಧ್ಯಾತ್ಮಿಕ ಯಾತ್ರೆಯ ಭಾಗವಾದ ಮಕ್ಕಾ, ಮದೀನಾ ನಗರಗಳ ವಸತಿ, ಸಾರಿಗೆ ಪ್ರಯಾಣ ಮುಂತಾದ ಸೇವೆಗಳಿಗೂ ಆನ್‌ಲೈನ್ ಮೂಲಕ ಆಯ್ಕೆ ಮಾಡಬಹುದಾಗಿದೆ.

ಹೊಸ ಆದೇಶ ಸೌದಿ ಅರೇಬಿಯಾದ ನೇರ ಸೇವೆ ಇಲ್ಲದ ದೇಶಗಳ ಯಾತ್ರಾರ್ಥಿಗಳಿಗೆ ಪ್ರಯೋಜನ ನೀಡಲಿದೆ.ಈ ಪ್ರಕಾರ ಅರ್ಜಿ ಸಲ್ಲಿಸುವವರಿಗೆ ಉಮ್ರಾ ವೀಸಾಕ್ಕೆ ಮಧ್ಯವರ್ತಿಗಳ ಅಗತ್ಯವಿಲ್ಲ. ಬದಲಾಗಿ ವಿವಿಧ ಕಂಪನಿಗಳ ವಿವಿಧ ಗುಣಮಟ್ಟದ ಪ್ಯಾಕೇಜ್ ಗಳಲ್ಲಿ ಒಂದನ್ನು ಆಯ್ಕೆ ಮಾಡುವ ಅವಕಾಶವಿದೆ.
ಜಗತ್ತಿನ ಎಲ್ಲೆಡೆಯಿಂದ ನೇರವಾಗಿ ಅರ್ಜಿ ಸಲ್ಲಿಸಲು ರಾಯಭಾರಿಯ ಸಹಾಯ ಬೇಕಾಗಿಲ್ಲ.

ಈ ರೀತಿ ತಲುಪುವ ಯಾತ್ರಾರ್ಥಿಗಳಿಗೆ ಉಮ್ರಾ ಕಂಪನಿಗಳು ಸೇವೆಗಳನ್ನು ಒದಗಿಸುತ್ತಿದೆಯೇ ಎನ್ನುವ ಬಗ್ಗೆ ಸಚಿವಾಲಯವು ಮೇಲ್ವಿಚಾರಣೆ ಮಾಡಲಿದೆ. ಉಮ್ರಾ ತೀರ್ಥಯಾತ್ರೆಯನ್ನು ಸರಳೀಕರಣಗೊಳಿಸುವ ಭಾಗವಾಗಿ ಈ ನಡೆ ಎನ್ನಲಾಗಿದೆ. ಅರಬಿಕ್, ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳ ಮೂಲಕ ಸೇವೆ ಲಭ್ಯವಿದೆ.

error: Content is protected !! Not allowed copy content from janadhvani.com