ಕುವೈತ್ ಸಿಟಿ: ಕುವೈತ್ ನಲ್ಲಿ ಮತ್ತೊಮ್ಮೆ ಸಾರ್ವಜನಿಕ ಕ್ಷಮಾಪಣೆಯನ್ನು ಜಾರಿಗೆ ತರಲಾಗಿದ್ದು, ಅನಧಿಕೃತವಾಗಿ ವಾಸವಿರುವವರು ಇದರ ಪ್ರಯೊಜನವನ್ನು ಪಡೆದು ಊರಿಗೆ ಮರಳಬಹುದು ಎನ್ನುವ ರೀತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ವಾಟ್ಸ್ ಆ್ಯಪ್ ಮತ್ತು ಫೇಸ್ ಬುಕ್ ನಲ್ಲಿ ತಪ್ಪು ಮಾಹಿತಿಯನ್ನು ರವಾನಿಸಲಾಗುತ್ತಿದ್ದು, ಈ ಪ್ರಚಾರದ ವಿರುದ್ದ ಕುವೈತ್‌ನ ಗೃಹ ಖಾತೆಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ವಾಸದ ಪರವಾನಗಿ ಇಲ್ಲದೆ ದೇಶದಲ್ಲಿ ಉಳಿದುಕೊಂಡಿರುವ ವಿದೇಶಿಗಳು ಜ.29ರಿಂದ ಫೆ.24ರ ವರೆಗೆ ದಂಡ ಪಾವತಿಸಿ, ಇಖಾಮಾ ಕಾನೂನುಬದ್ಧಗೊಳಿಸಬಹುದು ಅಥವಾ ದಂಡ ಪಾವತಿಸದೆ ದೇಶವನ್ನು ತೊರೆಯ ಬಹುದು ಎಂದು ಪ್ರಚಾರ ಪಡಿಸಲಾಗಿತ್ತು.ಇದು 2018ರ ಜ. 29 ರಿಂದ ಕುವೈತ್ ಸರ್ಕಾರವು ಸಾರ್ವಜನಿಕ ಕ್ಷಮಾಪಣೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಹರಿದಾಡಿದ ವಾರ್ತೆಯಾಗಿದೆ.
ಮೊದಲ ಹಂತದಲ್ಲಿ ರಿಯಾಯಿತಿಯನ್ನು ಫೆಬ್ರವರಿ 22 ರವರೆಗೆ ಜಾರಿಗೆ ತರಲಾಗಿದ್ದು, ನಂತರ ಏಪ್ರಿಲ್ 22 ರವರೆಗೆ ವಿಸ್ತರಿಸಲಾಗಿದ್ದವು. ಕಳೆದ ವರ್ಷದ ವಾರ್ತೆಯ ಲಿಂಕ್ ಕಂಡು ತಪ್ಪು ಗ್ರಹಿಸಿದ ಯಾರೋ ಕಳುಹಿಸಿದ ಧ್ವನಿ ಸಂದೇಶವು ಈ ವಾರ್ತೆಗೆ ಆಧಾರವಾಗಿರಬಹುದು ಎಂದು ಅರ್ಥೈಸಲಾಗಿದೆ. ಕೇರಳೀಯರು ಒಳಗೊಂಡಂತೆ ಅನಿವಾಸಿಗಳ ವಾಟ್ಸ್ ಆ್ಯಪ್ ಗ್ರೂಪುಗಳಲ್ಲಿ ಸುದ್ದಿ ಹರಡಿದ ನಂತರ ಸಾಮಾಜಿಕ ಕಾರ್ಯಕರ್ತರು ಸುದ್ದಿಯನ್ನು ಸರಿಪಡಿಸಿದ್ದಾರೆ. ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನಿಸುವ ಇಂತಹ ಮೋಸದ ವರದಿಗಳು ವೈರಲ್ ಆದ ಕಾರಣ ಗೃಹ ಸಚಿವಾಲಯ ಈ ಬಗ್ಗೆ ಅಲ್ಲಗೆಳೆದು ಪತ್ರಿಕಾ ಪ್ರಕಟನೆ ಹೊರಡಿಸಿದೆ.