ಲಖನೌ, ಜ.18- ಬಹುಜನ ಸಮಾಜ ಮತ್ತು ಸಮಾಜವಾದಿ ಪಕ್ಷ ಮೈತ್ರಿಯೊಂದಿಗೆ ಆರ್‍ಎಲ್ ಡಿ ಮತ್ತಿತರ ಪಕ್ಷಗಳನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಜಾಟ್ ಪ್ರಾಬಲ್ಯದ ಪಕ್ಷದೊಂದಿಗೆ ಶೀಘ್ರದಲ್ಲಿಯೇ ಸೀಟು ಹಂಚಿಕೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು. ಕಾಂಗ್ರೆಸ್ ಹೊರತುಪಡಿಸಿದ ಪ್ರತಿಪಕ್ಷಗಳ ಮೈತ್ರಿ ಉತ್ತರ ಪ್ರದೇಶದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಸಂದರ್ಶನವೊಂದದಲ್ಲಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಎಸ್‍ಪಿ- ಬಿಎಸ್‍ಪಿ ಜತೆಗೆ ಆರ್‍ಎಲ್‍ಡಿ, ನಿಶಾದ್ ಪಕ್ಷ ಹಾಗೂ ಸಂಜಯ್ ಚೌಹಾಣ್ ನೇತೃತ್ವದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆರ್‍ಎಲ್‍ಡಿ ಪಕ್ಷದೊಂದಿಗೆ ಸೀಟು ಹಂಚಿಕೆ ಸಂಬಂಧ ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪಕ್ಷ ಪ್ರಾಬಲ್ಯದ ಆಧಾರದ ಮೇಲೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ.
ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ನಿಶಾದ್ , ಚೌಹಾಣ್, ಪೀಸ್ ಪಾರ್ಟಿ ಮತ್ತಿತರ ಚಿಕ್ಕ ಪಕ್ಷಗಳ ನೆರವು ಪಡೆಯಲಾಗಿತ್ತು. ಲೋಕಸಭಾ ಚುನಾವಣೆಯಲ್ಲೂ ಅವರ ಸಹಾಯ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಬಿಎಸ್‍ಪಿ-ಎಸ್‍ಪಿ ನಡುವೆ ಸಮಾನವಾಗಿ ಸೀಟು ಹಂಚಿಕೆಯಾಗಿದ್ದು, ಈ ವಿಚಾರದಲ್ಲಿ ಮಾಯಾವತಿ ಪ್ರಾಬಲ್ಯ ಕುರಿತಂತೆ ಮಾತನಾಡುತ್ತಿರುವ ಬಿಜೆಪಿಯ ಹೇಳಿಕೆ ಸರಿಯಲ್ಲ. ಬಿಜೆಪಿಯವರು ಕೆಳಮಟ್ಟದ ಭಾಷೆ ಬಳಸಿ ಟೀಕಿಸಿದ್ದರೂ ನಾನು ಆ ರೀತಿಯಲ್ಲಿ ಮಾತನಾಡುವುದಿಲ್ಲ ಎಂದರು.
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರನ್ನು ಉತ್ತರ ಪ್ರದೇಶ ಉಸ್ತುವಾರಿವಾಗಿ ಬಿಜೆಪಿ ನೇಮಕ ಮಾಡಿದೆ. ಆದ್ದರಿಂದ ಅವರು ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಬಹುದು, ಬಿಜೆಪಿ ಶಾಸಕರು, ಸಂಸದರು ಕ್ಷೇತ್ರದಲ್ಲಿ ಯಾರೂ ಇಲ್ಲ. ಮುಂಬರುವ ಚುನಾವಣೆಯಲ್ಲಿ ತಮ್ಮ ಸೋಲು ಖಚಿತ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದರು.