janadhvani

Kannada Online News Paper

ಶಾಸಕರನ್ನು ಕಿಡ್ನಾಪ್ ಮಾಡಿದ ಅಮಿತ್ ಷಾ-ಹೇಬಿಯೆಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾದ ಕುಟುಂಬ

ಬೆಂಗಳೂರು, ಜ.17- ನಾಪತ್ತೆಯಾಗಿರುವ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಿಡ್ನ್ಯಾಪ್ ಮಾಡಿದ್ದಾರೆಂದು ನ್ಯಾಯಾಲಯದಲ್ಲಿ ಹೇಬಿಯೆಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಕುಟುಂಬದ ಸದಸ್ಯರು ತಯಾರಿ ನಡೆಸಿಕೊಂಡಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಆಪರೇಷನ್ ಕಮಲದ ವಿರುದ್ಧ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಆನಂದರಾವ್ ವೃತ್ತದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಶಾಸಕರನ್ನು ಅಮಿತ್ ಷಾ ಕಿಡ್ನ್ಯಾಪ್ ಮಾಡಿ ಬಚ್ಚಿಟ್ಟಿದ್ದಾರೆ.
ಅವರನ್ನು ಹುಡುಕಿಕೊಡುವಂತೆ ಕುಟುಂಬ ಸದಸ್ಯರು ನ್ಯಾಯಾಲಯಕ್ಕೆ ಹೇಬಿಯೆಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆಂದು ಹೇಳಿದರು. ಬಿಜೆಪಿ ರಫೇಲ್ ಹಗರಣದಲ್ಲಿ ಸಂಪಾದಿಸಿದ 33 ಸಾವಿರ ಕೋಟಿ ಹಣದಿಂದ ಆಪರೇಷನ್ ಕಮಲ ಮಾಡಲು ಮುಂದಾಗಿದ್ದು, ಶಾಸಕರನ್ನು ಖರೀದಿಸುವ ಮೂಲಕ ರಾಜ್ಯದ ಜನರನ್ನು ಅವಮಾನಿಸಲು ಬಿಜೆಪಿಯ ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದರು ಎಂದು ಅವರು ಹರಿಹಾಯ್ದರು.

ನಕಲಿ ಚಾಣಕ್ಯ ಅಮಿತ್ ಷಾ ಅವರು ತಿರುಕನ ಕನಸು ಕಾಣುತ್ತಿದ್ದಾರೆ. ಕರ್ನಾಟಕದ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಪ್ರಯತ್ನ ಸಫಲವಾಗಲ್ಲ. ಬಿಜೆಪಿಯ ಆಪರೇಷನ್ ಕಮಲದ ಹಿಂದೆ ಸರ್ಕಾರ ಪತನಗೊಳಿಸುವ ಹುನ್ನಾರದ ಕಾರಣ ಒಂದು ಕಡೆಯಾದರೆ ಮತ್ತೊಂದು ಕಾರಣ ರಫಾಯಲ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯುವುದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಅಮಿತ್ ಷಾ ಅವರಿಗೆ ಹಂದಿಜ್ವರ ಬಂದಿದೆ. ಮೊದಲು ಅವರು ಚಿಕಿತ್ಸೆ ಪಡೆದು ಗುಣಮುಖರಾಗಲಿ ಎಂದು ಹರಿಪ್ರಸಾದ್ ಹೇಳಿದರು.

error: Content is protected !! Not allowed copy content from janadhvani.com