janadhvani

Kannada Online News Paper

ರಾಜ್ಯದ 6,701 ಮಂದಿಗೆ ಹಜ್ ಯಾತ್ರೆಗೆ ಅವಕಾಶ

ಬೆಂಗಳೂರು,ಜ.16-ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ರಾಜ್ಯದ 6,701 ಮಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಝಮೀರ್ ಅಹಮ್ಮದ್ ಖಾನ್ ತಿಳಿಸಿದರು.

ರಾಜ್ಯ ಹಜ್ ಸಮಿತಿ ವಿಧಾನಸೌಧದಲ್ಲಿ ಇಂದು ಆಯೋಜಿಸಿದ್ದ ಹಜ್ ಯಾತ್ರಾರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಖುರ್ಆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಜ್ ಯಾತ್ರಾರ್ಥಿಗಳ ರಾಜ್ಯದ ಕೋಟಾವನ್ನು ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದರು.

ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲು ರಾಜ್ಯದ 13995 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 6701 ಮಂದಿಗೆ ಮಾತ್ರ ಅವಕಾಶ ದೊರಕಿದ್ದು, ಉಳಿದವರು ನಿರಾಶರಾಗುವುದು ಬೇಡ ಎಂದು ಹೇಳಿದರು.70 ವರ್ಷಕ್ಕಿಂತ ಮೇಲ್ಪಟ್ಟ 794 ಮಂದಿ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ 23 ಮಹಿಳೆಯರು ಸೇರಿದಂತೆ 817 ಮಂದಿಯನ್ನು ಮೀಸಲಾತಿಯಡಿ ನೇರವಾಗಿ ಆಯ್ಕೆ ಮಾಡಲಾಗಿದೆ. 5884 ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ನಶೀರ್ ಅಹಮ್ಮದ್, ಮೌಲಾನ ಮಕ್ಷುದ್, ಇಮ್ರಾನ್, ನಜೀರ್ ಅಹಮ್ಮದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com