ಮಧುರೈ: ದೇಶದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ 2019 ರ ಚುನಾವಣೆಯಲ್ಲಿ ಯಾರು ವಿಜಯ ಸಾಧಿಸುತ್ತಾರೆ, ಮುಂದಿನ ಪ್ರಧಾನಮಂತ್ರಿ ಯಾರಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ನಿಲ್ಲುತ್ತಿದ್ದ ಬಾಬಾ ರಾಮ್‍ದೇವ್ ಇದೀಗ ಮುಂದಿನ ಪ್ರಧಾನಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಅಚ್ಚರಿ ಮೂಡಿಸಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮ್‍ದೇವ್, ದೇಶದಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿ ಜಟಿಲವಾಗಿದೆ. 2019 ರಲ್ಲಿ ಯಾರು ದೇಶವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗದು? ಆದರೆ ಹೋರಾಟ ಬಹಳ ರೋಮಾಂಚನಕಾರಿಯಾಗಿರುವುದು ಖಚಿತ. ನಾನು ರಾಜಕೀಯದಲ್ಲಿ ಕೇಂದ್ರೀಕರಿಸುತ್ತಿಲ್ಲ. ನನ್ನ ವೈಯಕ್ತಿಕ ದೃಷ್ಟಿ ಸ್ವತಂತ್ರ ಮತ್ತು ಎಲ್ಲಾ ಪಕ್ಷ. ನಾನು ಯಾವುದೇ ವ್ಯಕ್ತಿ ಅಥವಾ ಯಾವುದೇ ಪಕ್ಷದ ಪರ-ವಿರೋಧ ಪ್ರಚಾರ ಮಾಡುವುದಿಲ್ಲ ಎಂದು ಬಾಬಾ ರಾಮದೇವ್ ತಮಿಳುನಾಡಿನ ಮಧುರೈನಲ್ಲಿ ಹೇಳಿದರು.
ನಮಗೆ ರಾಜಕೀಯ ಅಥವಾ ಧಾರ್ಮಿಕ ಉದ್ದೇಶದ ದೇಶ ಬೇಕಿಲ್ಲ. ನಮಗೆ ಬೇಕಿರುವುದು ಆಧ್ಯಾತ್ಮಿಕ ದೇಶ ಮತ್ತು ಆಧ್ಯಾತ್ಮಿಕ ಜಗತ್ತು. ಯೋಗ ಮತ್ತು ವೈದಿಕ ಆಚರಣೆಗಳಿಂದ ನಾವು ದೈವಿಕ, ಸಮೃದ್ಧಿಯ ಮತ್ತು ಆಧ್ಯಾತ್ಮಿಕ ಭಾರತವನ್ನು ನಿರ್ಮಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.