ಚೆನ್ನೈ (ಡಿ.26): ಗರ್ಭಿಣಿ ಮಹಿಳೆಗೆ ಎಚ್ಐವಿ ಸೋಂಕಿತ ರಕ್ತವನ್ನು ವರ್ಗಾವಣೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ವಿರುಧುನಗರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಶಿವಕಾಶಿ ಪಟ್ಟಣದ ಮೂವರು ಲ್ಯಾಬ್ ಟೆಕ್ನಿಶಿಯನ್ ಅನ್ನು ಅಮಾನತುಗೊಳಿಸಲಾಗಿದೆ. ಎರಡು ವರ್ಷಗಳ ಹಿಂದೆ ಶೇಖರಿಸಲ್ಪಟ್ಟ ಈ ರಕ್ತವನ್ನು 24 ವರ್ಷದ ಗರ್ಭಿಣಿ ಮಹಿಳೆಗೆ ನೀಡಲಾಗಿದೆ. ಈ ರಕ್ತವನ್ನು ಯಾರಿಂದ ಶೇಖರಿಸಲಾಗಿತ್ತು ಎಂಬ ಮಾಹಿತಿಯನ್ನು ಸಂಗ್ರಹಣೆ ಮಾಡದೆ ನಿರ್ಲಕ್ಷ್ಯ ತೋರಲಾಗದೆ.
ಇನ್ನು ಮಹಿಳೆಗೆ ಸರ್ಕಾರದ ವತಿಯಿಂದ ಆರ್ಥಿಕ ಪರಿಹಾರ, ಆಕೆ ಮತ್ತು ಆಕೆಯ ಗಂಡನಿಗೆ ಕೆಲಸವನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ, ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸಹಾಯ ಕೇಳಿದ್ದಾರೆ.
ವ್ಯಕ್ತಿಯೊಬ್ಬ ಶಿವಕಾಶಿಯಲ್ಲಿ ತನ್ನ ರಕ್ತವನ್ನು ದಾನ ಮಾಡಿದ್ದಾನೆ. ಈ ರಕ್ತದ ಮಾದರಿ ಪರೀಕ್ಷೆ ನಡೆಸದ ಲ್ಯಾಬ್ ಟೆಕ್ನಿಷಿಯನ್ಗಳು, ರಕ್ತದ ಮಾದರಿಯಲ್ಲಿ ಯಾವುದೇ ರೋಗ, ದೋಷ ಪತ್ತೆಯಾಗಿಲ್ಲ ಎಂದು ಸಂಗ್ರಹಿಸಿದ್ದಾರೆ. ಬಳಿಕ ವಿದೇಶದ ಕೆಲಸಕ್ಕಾಗಿ ಆತ ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದಾಗ ಈತನಿಗೆ ಎಚ್ಐವಿ ಸೋಂಕಿರುವುದು ಪತ್ತೆಯಾಗಿದೆ. ತಕ್ಷಣಕ್ಕೆ ಈತ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ತಿಳಿಸಿದ್ದಾನೆ. ಈ ವೇಳೆಗಾಗಲೇ ಅಂದರೆ ಡಿ.3ರಂದು ಗರ್ಭಿಣಿ ಮಹಿಳೆಗೆ ಈ ರಕ್ತವನ್ನು ವರ್ಗಾವಣೆ ಮಾಡಲಾಗಿತ್ತು.
ಎನ್ಜಿಒ ಒಂದರ ಮೂಲಕ ಆತ ಎರಡು ವರ್ಷದ ಹಿಂದೆ ರಕ್ತವನ್ನು ದಾನವಾಗಿ ಮಾಡಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಆತನ ವೈದ್ಯಕೀಯ ವಿವರಗಳನ್ನು ಕೂಡ ಅವರು ಸಂಗ್ರಹಿಸಿಲ್ಲ. ಆತ ಎಚ್ಐವಿ ಸೊಂಕು ಹಾಗೂ ಹೆಪಟೈಟಸ್ ಬಿಯಿಂದ ಬಳಲುತ್ತಿದ್ದಾನೆ ಎಂದು ಈಗ ಆತನ ಪರೀಕ್ಷೆ ನಡೆಸಿರುವ ವೈದ್ಯರು ತಿಳಿಸಿದ್ದಾರೆ.
ಮಹಿಳೆಗೆ ರಕ್ತದ ಸೊಂಕು ತಲುಪಿದ ತಕ್ಷಣ ಪತ್ತೆಯಾಗಿರುವುದರಿಂದ ಆಕೆಗೆ ಆ್ಯಂಟಿರಿಟ್ರೋವಲ್ ಚಿಕಿತ್ಸೆ ನೀಡಲಾಗುವುದು. ಇದರಿಂದ ಆಕೆ ದೀರ್ಘಕಾಲ ಬದುಕುವ ಸಾಧ್ಯತೆ ಇದೆ. ಇನ್ನು ಆಕೆ ಕುಟುಂಬ ಮಗುವಿಗೆ ಈ ಸೊಂಕು ಅಂಟಿದೆಯಾ ಎಂಬ ಬಗ್ಗೆ ಹೆರಿಗೆಯಾದ ಬಳಿಕವೆ ತಿಳಿಯಬೇಕಾಗಿದೆ.
ಇದರಲ್ಲಿ ಸಂಪೂರ್ಣ ದೋಷ ಕಂಡುಬಂದಿದ್ದು, ರಕ್ತದ ಮಾದರಿ ಪರೀಕ್ಷೆ ಮಾಡದೇ ಲ್ಯಾಬ್ ಟೆಕ್ನಿಷಿಯನ್ ಸಂಗ್ರಹ ಮಾಡಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆಯಲ್ಲ. ಈ ಕುರಿತು ನಾವು ತನಿಖೆಗೆ ಮುಂದಾಗಿದ್ದೇವೆ. ರಕ್ತ ದಾನ ಮಾಡಿದ ಯುವಕನನ್ನು ನಾವು ಪರೀಕ್ಷೆಗೆ ಒಳಪಡಿಸಿದ್ದೇವೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಉಪವಿಭಾಗಧಿಕಾರಿ ಡಾ, ಆರ್ ಮನೋಹರ್ ತಿಳಿಸಿದ್ದಾರೆ.
ಆ್ಯಂಟಿ ರಿಟ್ರೋವಲ್ ಚಿಕಿತ್ಸೆ ನೀಡುವುದರಿಂದ ಎಚ್ಐವಿ ಸೋಂಕು ಹರಡುವುದನ್ನು ತಡೆಯ ಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.