janadhvani

Kannada Online News Paper

ಅಶ್ರಫ್ ಅಡ್ಡೂರ್ ಅಗಲಿದ ದುಃಖ ತಡೆಯಲಾಗುತ್ತಿಲ್ಲ,am helpless…

✒ಹಮೀದ್ ಬಜ್ಪೆ

ಅಶ್ರಫ್ ಅಡ್ಡೂರ್ ನಿರ್ಗಮಿಸಿದ ಸುದ್ದಿ ತಿಳಿದು ಏನು ಮಾತಾಡಬೇಕು ಅಂತಲೇ ಗೊತ್ತಾಗಲಿಲ್ಲ. ಕೆಲವು ದಿನಗಳ ಹಿಂದೆ ಆತನಿಗೆ ಅಪಘಾತವಾದ ವಿಷಯ ನನಗೆ ಗೊತ್ತಿರಲಿಲ್ಲ.

ಎರಡು ವಾರದ ಹಿಂದಷ್ಟೇ ಅಡ್ಡೂರಿಗೆ ಹೋಗಿದ್ದೆ. ಅಲ್ಲಿನ SSF ಅಲ್ಲೊಂದು ಅದ್ಭುತವಾದ ಕಾರ್ಯಕ್ರಮ ಏರ್ಪಡಿಸಿತ್ತು. ಅಶ್ರಫ್ ಸಿಗುತ್ತಾನೆಂಬುದು ಗೊತ್ತಿತ್ತು. ಸಿಕ್ಕಿಯೂ ಇದ್ದ. ಮುಖ ತುಂಬು ನಗು!
ನನಗೆ ನೆನಪಿರುವ ಮಟ್ಟಿಗೆ ಅಶ್ರಫ್ ನನ್ನು ನಾನು ಮೊದಲ ಬಾರಿ ನೋಡಿದ್ದು 20 ವರ್ಷಗಳ ಹಿಂದೆ. ಚಿಕ್ಕ ಪ್ರಾಯದಲ್ಲೆ ಮನೆಯ ಜವಾಬ್ದಾರಿಯನ್ನು ಹೆಗಲಿಗೆ ಹಾಕಿ ನಮ್ಮೂರಿಗೆ ದುಡಿಯಲು ಬಂದಿದ್ದ. ಮಿತ್ರ ಹನೀಫ್ ನ ಮನೆಯಲ್ಲಿ ಕೆಲಸಕ್ಕಿದ್ದ. ಆತನನ್ನು ನಾವು ‘ ಅಡ್ಡೂರ್’ ಅಂತಲೇ ಕರೆಯುತ್ತಿದ್ದೆವು. ಚಿಕ್ಕ ಪ್ರಾಯದಲ್ಲೆ ಆತನಿಗೆ SSF ಅಂದರೆ ಪ್ರಾಣ.

ಆ ಕಾಲದಲ್ಲಿ ಪೇರೋಡ್ ಉಸ್ತಾದರ ಪ್ರವಚನವೆಂದರೆ ನಮಗೆಲ್ಲಾ ಹಬ್ಬ. ನಾವು ಹೋಗುವ ಕಡೆಗೆಲ್ಲಾ ಈ ಅಶ್ರಫ್ ಬರುತ್ತಿದ್ದ. ಉಸ್ತಾದರ ಮಾತುಗಳನ್ನು ಕೇಳುತ್ತಲೇ ಭಾವುಕನಾಗುತ್ತಿದ್ದ. ಮೊನ್ನೆ ಅಡ್ಡೂರಿನ ಕಾರ್ಯದಲ್ಲೂ ಅದೇ ಆಯಿತು. ಪೇರೋಡ್ ಉಸ್ತಾದರು ಪ್ರಾರ್ಥಿಸುತ್ತಿದ್ದಾಗ ಈತ ನನ್ನೆದುರೇ ನಿಂತಿದ್ದ. ಆತನನ್ನೇ ದಿಟ್ಟಿಸಿದೆ. ಕಣ್ಣಿನಲ್ಲಿ ಕಾವೇರಿ!

ನಾನು, ನಮ್ಮೂರಿನ ನಮ್ಮ ತಲೆಮಾರಿನವರು ಅಶ್ರಫ್ ನನ್ನು miss ಮಾಡಿಕೊಳ್ಳದೆ ಇರಲಾರೆವು. ಆತ ಎಸ್ಸಸ್ಸೆಫ್ ಗೆ ಕೇವಲ ಸದಸ್ಯನಾಗಿ ಸೇರಲಿಲ್ಲ. ಹೃದಯಪೂರ್ವಕವಾಗಿ ತನ್ನದಾಗಿಸಿಕೊಂಡವನು. ಎಸ್ಸಸ್ಸೆಫ್ಫಿ ನ ಸದಸ್ಯತ್ವವನ್ನು ಮೊದಲ ಬಾರಿಗೆ ಆತನಿಗೆ ನೀಡಿದವನೂ ನಾನೇ. ಸಂಘಟನೆಗೆ ಸೇರಿದ ಮೊದ ಮೊದಲು ಆತ ಬಜ್ಪೆಯಲ್ಲೇ ಇದ್ದ. ನಂತರ ಹುಟ್ಟೂರು ಅಡ್ಡೂರಿಗೆ ಹೋದ. ಅಲ್ಲಿಯೂ ಸಂಘಟನೆ ಆರಂಭಿಸಲು ಕಷ್ಟಪಟ್ಟ. ಅದಕ್ಕಾಗಿ ಪೆಟ್ಟೂ ತಿಂದ.

ಆತನದ್ದು ನಿಷ್ಕಳಂಕ ಸೇವೆ. ಜಲಪಾತದ ಧುಮುಕು. ಅಡ್ಡೂರಿನಲ್ಲಿ SSF ಆರಂಭವಾದ ದಿನಗಳಲ್ಲಿ ಆತ ಅಕ್ಷರಶ: ಖುಷಿಯಾದ ಮಗುವಿನಂತೆ ಕುಣಿದಾಡಿದ್ದ. ಸಂಘಟನೆಗೆ ದುಡಿಯುವುದು, ಅದರ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಶ್ರಫ್ ನಿಗೆ ಇಷ್ಟವಾಗಿದ್ದವು.
ಇರೋವರೆಗೂ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡ. ಚಿಕ್ಕ ಪ್ರಾಯದಲ್ಲೇ ದುಡಿಮೆಗೆ ಬಿದ್ದ. ದುಡಿದ ಅಷ್ಟನ್ನೂ ಕುಟುಂಬದ ಸುಖಕ್ಕಾಗಿ ವ್ಯಯಿಸಿದ. ಕಷ್ಟದಲ್ಲೇ ಬದುಕಿದ.
ಸುದ್ದಿ ತಿಳಿಯುತ್ತಲೇ ಎಲ್ಲೋ ಇದ್ದ ನಾನು ಅಂತಿಮ ದರ್ಶನಕ್ಕೆ ಹೊರಡಲನುವಾದೆ. ಅಶ್ರಫ್ ನನ್ನು ಚಿಕ್ಕಂದಿನಿಂದಲೇ ತನ್ನ ಬಳಿ ಕೆಲಸಕ್ಕೆ ಇಟ್ಟುಕೊಂಡಿದ್ದ ಹನೀಫ್ ಕರೆ ಮಾಡಿದ್ದ. SSF ನ ಅಂಬುಲೆನ್ಸ್ ಕಳಿಸು ಅಂತ ಹೇಳಿದ. ಯಾಕೋ ಅಳು ತಡೆಯಲಾಗಲಿಲ್ಲ.

5 ವರ್ಷದ ಹಿಂದೆ ಕರ್ನಾಟಕ ಯಾತ್ರೆಯ ಸಮಾರೋಪದಲ್ಲಿ ನಾವು ಸಂಘಟನೆಯ ವತಿಯಿಂದ ಅಂಬುಲೆನ್ಸ್ ಖರೀದಿಸಿದ್ದೆವು. ನೆಹರೂ ಮೈದಾನದಲ್ಲಿ ಅಂಬುಲೆನ್ಸನ್ನು ನೋಡಿದ ಅಶ್ರಫ್ ಖುಷಿಯಾಗಿದ್ದ. ‘ ನಮಗೇನಾದರೂ ಆದರೆ ನಮ್ಮನ್ನು ಕೊಂಡೊಯ್ಯಲು ನಮ್ಮದ್ದೇ ಅಂಬುಲೆನ್ಸ್ ಬಂತಲ್ಲಾ’ ಎನ್ನುತ್ತಾ ಸಂಭ್ರಮ ಪಟ್ಟಿದ್ದ. ಆ ಮಾತು ನೆನೆಸುವಾಗಲೇ ದೇಹ ಕಂಪಿಸುತ್ತಿದೆ. ಈ ಮಕ್ಕಳು ನಮಗೆ ಅದ್ಯಾವ ಸಂಬಂಧವೋ..?
ಅಶ್ರಫ್ ನನ್ನು ಕೊಂಡೊಯ್ಯಲು ಅಂಬುಲೆನ್ಸ್ ನೋಡಿ ಯಾಕೋ ದುಃಖ ತಡೆಯಲಾಗುತ್ತಿಲ್ಲ. am helpless…

ಹಮೀದ್ ಬಜ್ಪೆ.

error: Content is protected !! Not allowed copy content from janadhvani.com