janadhvani

Kannada Online News Paper

ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿಗೆ ಡಾಕ್ಟರೇಟ್

ಮಂಗಳೂರು: ಯುವ ಇಸ್ಲಾಮಿಕ್ ವಿದ್ವಾಂಸ ಹಾಗೂ ವಾಗ್ಮಿ ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಒಪನ್ ಇಂಟರ್‌ನ್ಯಾಷನಲ್ ಯುನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ನೀಡಿದೆ.

ಮನಶಾಸ್ತ್ರಜ್ಞ ಹಾಗೂ ವಿವಿಧ ವಿಶ್ವ ವಿದ್ಯಾನಿಲಯಗಳ ರಿಸರ್ಚ್ ಗೈಡ್ ಆಗಿರುವ ಕೊಟ್ಟಯಂನ ಪ್ರೊ.ಆರ್. ಸುರೇಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಮೈಂಡ್ ಆ್ಯಂಡ್ ಸ್ಪಿರಿಚ್ಯುವಾಲಿಟಿ- ಎ ಡಿಟೈಲ್ಡ್ ಸ್ಟಡೀ ಆಫ್ ಪವರ್ ಆಫ್ ಪ್ರೆಯರ್, ಟು ಎಲಿಮಿನೇಟ್ ದಿ ನೆಗೆಟೀವ್ ಮೆಂಟಲ್ ಆಟಿಟ್ಯೂಡ್ ಟು ಇಂಕ್ರೀಸ್ ದಿ ಲೆವಲ್ ಆಫ್ ಕಾನ್ಫಿಡೆನ್ಸ್ ಇನ್ ಟೇಕಿಂಗ್ ಅಫ್ ಚಾಲೆಂಜಸ್ ಇನ್ ಲೈಫ್’ ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಲಭಿಸಿದೆ.

ನ. 25ರಂದು ಶ್ರೀಲಂಕಾದ ಕೊಲಂಬೋದಲ್ಲಿನ ಬಂಡಾರನಾಯ್ಕೆ ಮೆಮೋರಿಯಲ್ ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ಹಾಲ್ ನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ಪ್ರದಾನಿಸಲಾಗುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅಬ್ದುರ್ರಶೀದ್ ಝೈನಿ ಅಂತಾರಾಷ್ಟ್ರೀಯ ಖ್ಯಾತಿಯ ಮನಶಕ್ತಿ ತರಬೇತುದಾರ ಡಾ. ಪಿ.ಪಿ.ವಿಜಯನ್ ಅವರಿಂದ ಮೈಂಡ್ ಮಾಸ್ಟರಿ, ಕೌನ್ಸೆಲಿಂಗ್ ಹಾಗೂ ಮೈಂಡ್ ಪವರ್ ಟ್ರೈನಿಂಗ್‌ನಲ್ಲಿ ವಿವಿಧ ಕೋರ್ಸ್‌ಗಳನ್ನು ಮುಗಿಸಿದ್ದಾರೆ. ಅಲ್ಲದೆ ಡಾ. ಆತ್ಮದಾಸ್ ಯಮಿ ಅವರಿಂದಲೂ ವಿವಿಧ ಮನಶಾಸ್ತ್ರೀಯ ಕೋರ್ಸ್‌ಗಳನ್ನು ಪೂರ್ತಿ ಮಾಡಿರುತ್ತಾರೆ.

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಹಿರಿಯ ವಿದ್ವಾಂಸ ದಿ.ಎಂ.ಎಸ್. ಮೂಸ ಮುಸ್ಲಿಯಾರ್ ಹಾಗೂ ಆಸಿಯಾ ದಂಪತಿಯ ಪುತ್ರನಾಗಿ 1972ರಲ್ಲಿ ಜನಿಸಿದ ಅಬ್ದುರ್ರಶೀದ್ ಝೈನಿ ಧಾರ್ಮಿಕ ಶಿಕ್ಷಣದಲ್ಲಿ ಝೈನಿ, ಸಖಾಫಿ ಹಾಗೂ ಕಾಮಿಲ್ ಸಖಾಫಿ ಪದವಿಗಳನ್ನು ಪಡೆದಿದ್ದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾಗಿದ್ದಾರೆ.

ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡುವ ಝೈನಿ ಪುತ್ತೂರು ಕುಂಬ್ರ ಮರ್ಕಝುಲ್ ಹುದಾ, ಕಾಟಿಪಳ್ಳ ಮಿಸ್ಬಾಹ್ ಹಾಗೂ ತಲಪಾಡಿ ಮಿನ್ಹಾಝ್ ಮಹಿಳಾ ಕಾಲೇಜುಗಳ ಸ್ಥಾಪಕರಲ್ಲಿ ಪ್ರಮುಖರಾಗಿದ್ದಾರೆ.

ಎಸೆಸ್ಸೆಫ್ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಅಖಿಲ ಭಾರತ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ಸುನ್ನಿ ಯುವಜನ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್.) ಅಂತಾರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷರಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಕನ್ನಡದಲ್ಲಿ ಪವಿತ್ರ ಕುರ್‌ಆನ್ ವ್ಯಾಖ್ಯಾನ ಸಹಿತ ಆರು ಪುಸ್ತಕಗಳನ್ನು ರಚಿಸಿರುವ ಇವರು ಸುಮಾರು 18 ವರ್ಷಗಳಿಂದ ತಲಪಾಡಿಯ ಬಿಲಾಲ್ ಜುಮಾ ಮಸೀದಿಯಲ್ಲಿ ಖತೀಬರಾಗಿ ಸೇವೆಗೈಯ್ಯುತ್ತಿದ್ದಾರೆ.

error: Content is protected !! Not allowed copy content from janadhvani.com