ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೆ ಅಭ್ಯಂತರವಿಲ್ಲ ಎಂದು ಅಯೋಧ್ಯೆ ಭೂ ವಿವಾದದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
‘ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವುದಾದರೆ ನಮ್ಮ ಆಕ್ಷೇಪವಿಲ್ಲ. ದೇಶದ ಹಿತದೃಷ್ಟಿಯಿಂದ ಸುಗ್ರೀವಾಜ್ಞೆ ಹೊರಡಿಸುವುದಾದರೆ ಹಾಗೆಯೇ ಮಾಡಿ. ನಾವು ಕಾನೂನನ್ನು ಪಾಲಿಸುವ ನಾಗರಿಕರು. ಈ ನೆಲದ ಪ್ರತಿಯೊಂದು ಕಾನೂನನ್ನೂ ನಾವು ಗೌರವಿಸುತ್ತೇವೆ’ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅನ್ಸಾರಿ ಹೇಳಿದ್ದಾರೆ.
ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಈಚೆಗೆ ಸುಪ್ರೀಂ ಕೋರ್ಟ್ 2019ರ ಜನವರಿಗೆ ಮುಂದೂಡಿತ್ತು. ನಂತರ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಆರ್‌ಎಸ್‌ಎಸ್, ವಿಎಚ್‌ಪಿ ಸೇರಿ ಹಲವು ಬಲಪಂಥೀಯ ಸಂಘಟನೆಗಳು ಸುಗ್ರೀವಾಜ್ಞೆಗೆ ಆಗ್ರಹಿಸಿವೆ. ರಾಮ ಮಂದಿರದ ತ್ವರಿತ ನಿರ್ಮಾಣಕ್ಕೆ ಆಗ್ರಹಿಸಿ ಇದೇ 25ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಶಿವಸೇನಾ ಘೋಷಿಸಿವೆ.
ಇದರ ಬೆನ್ನಲ್ಲೇ, ಅಯೋಧ್ಯೆಯಲ್ಲಿರುವ ಮುಸ್ಲಿಮರ ಸುರಕ್ಷತೆ ಬಗ್ಗೆಯೂ ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದಾರೆ. ಮುಸ್ಲಿಮ್ ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
‘1992ರಲ್ಲಿ ನಮ್ಮ ಮನೆಗಳನ್ನು ಸುಡಲಾಯಿತು. ಅದಾದ ನಂತರ ನಾವಲ್ಲಿಗೆ (ವಿವಾದಿತ ಜಾಗಕ್ಕೆ) ಹೋಗುತ್ತಿಲ್ಲ. ಅಯೋಧ್ಯೆಯಲ್ಲಿರುವ ಹಿಂದೂ, ಮುಸ್ಲಿಮರಿಗೆ ರಕ್ಷಣೆ ನೀಡಬೇಕು. 1992ರಂತೆಯೇ ಮರಳಿ ಅಲ್ಲಿ ಜನ ಗುಂಪು ಸೇರಿದರೆ ನಾನೂ ಸೇರಿ ಅಯೋಧ್ಯೆಯ ಮುಸ್ಲಿಮರಿಗೆ ರಕ್ಷಣೆ ನೀಡಬೇಕು’ ಎಂದು ಅನ್ಸಾರಿ ಹೇಳಿದ್ದಾರೆ.
‘ನನ್ನ ರಕ್ಷಣೆಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನನ್ನನ್ನು ಭೇಟಿಯಾಗಲು ನಿತ್ಯ ಹಲವು ಮಂದಿ ಬರುತ್ತಿದ್ದು, ನನಗೆ ಅಪಾಯವಿದೆ. ನನಗೆ ನೀಡಿರುವ ಭದ್ರತೆಯನ್ನು ನವೆಂಬರ್ 25ರ ಮೊದಲು ಹೆಚ್ಚಿಸದಿದ್ದರೆ ನಾನು ಊರು ಬಿಟ್ಟು ಬೇರೆ ಎಲ್ಲಿಗಾದರೂ ಹೋಗುತ್ತೇನೆ’ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆಯ ವಿವಾದಿತ ಭೂ ಪ್ರದೇಶವನ್ನು ಮೂರು ಭಾಗವಾಗಿ ಹಂಚಿಕೆ ಮಾಡಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಇಕ್ಬಾಲ್ ಅನ್ಸಾರಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದರ ವಿಚಾರಣೆ ಪ್ರಗತಿಯಲ್ಲಿದೆ.