ಬೆಂಗಳೂರು, ನವೆಂಬರ್ 11 : ಕರ್ನಾಟಕದ ಜನಪ್ರಿಯ ರಾಜಕಾರಣಿ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 11ರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಕಡೆಯ ಹಂತದಲ್ಲಿ ಲಂಡನ್ನಿಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಸೋಮವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನವೇ ಕ್ಯಾನ್ಸರ್ ಉಲ್ಬಣಗೊಂಡಿತ್ತು. ಸಂದರ್ಶನ ನೀಡಲು ಕಷ್ಟವಾಗುತ್ತಿದ್ದರೂ, ನಗುಮೊಗದಿಂದಲೇ ಮಾತನಾಡುತ್ತಿದ್ದರು. ತಮ್ಮೆಲ್ಲ ನೋವನ್ನು ಮರೆತು ಪ್ರಚಾರದಲ್ಲಿ ತೊಡಗಿದ್ದರು. ಆದರೆ, ಅಷ್ಟರಲ್ಲಾಗಲೇ ಕ್ಯಾನ್ಸರ್ ಕಡೆಯ ಹಂತ ತಲುಪಿಬಿಟ್ಟಿತ್ತು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಹಾಗು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿದ್ದ ಅವರು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಗೆದ್ದಿದ್ದರು. ಅವರು ಪತ್ನಿ ಅದಮ್ಯ ಚೇತನ ಸಂಸ್ಥೆಯ ರೂವಾರಿ ಡಾ. ತೇಜಸ್ವಿನಿ, ಮಕ್ಕಳಾದ ಐಶ್ವರ್ಯ, ವಿಜೇತಾ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.