ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣಿಧಣಿ ಜನಾರ್ಧನ ರೆಡ್ಡಿ ನಡುವೆ ಭಾರೀ ವಾಗ್ವಾದಗಳು ನಡೆಯುತ್ತಿವೆ. ನಿನ್ನೆ ತಾನೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಸಿದ್ದರಾಮಯ್ಯಗೆ ಮಾನ ಮರ್ಯಾದೆಯಿಲ್ಲ. ಹಾಗಾಗಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲೂ ಆಗುವುದಿಲ್ಲ, ಸಿದ್ದರಾಮಯ್ಯರ ಮಗನ ಸಾವು ಅವರ ಪಾಪಕ್ಕೆ ದೇವರು ನೀಡಿದ ಶಿಕ್ಷೆ ಎಂದು ಹೇಳಿದ್ದರು. ಇದೀಗ ಈ ಕುರಿತು ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಜನರ ಮನ ಗೆದ್ದಿದೆ.
ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದ ಸಿದ್ದರಾಮಯ್ಯ, “ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ” ಎಂದು ಉಲ್ಲೇಖಿಸಿದ್ದಾರೆ. ಈ ಸೌಮ್ಯವಾದ ಉತ್ತರಕ್ಕೆ ಟ್ವಿಟ್ಟರ್ ಬಳಕೆದಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಸಿದ್ದರಾಮಯ್ಯನವರ ದೊಡ್ಡ ಗುಣ ಎಂದು ಹಾಡಿ ಹೊಗಳಿದ್ದಾರೆ.