ಬೀದರ್: ‘2019ರ ಲೋಕಸಭೆ ಚುನಾವಣೆಯಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಸಂವಿಧಾನ ಅಥವಾ ಮನುಸ್ಮತಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆರ್ಎಸ್ಎಸ್ನಿಂದಲೇ ಹಿಂದುತ್ವಕ್ಕೆ ಗಂಡಾಂತರ ಇದೆ’ ಎಂದು ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿ ಕರೆ ನೀಡಿದರು.
ನಗರದ ಗುರುನಾನಕ್ ಗೇಟ್ ಬಳಿಯ ಝೀರಾ ಫಂಕ್ಷನ್ ಹಾಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ದಲಿತ, ಮುಸ್ಲಿಂ ಹಾಗೂ ಹಿಂದುಳಿದ ವರ್ಗಗಳ ಐಕ್ಯತಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಲೋಕಸಭೆಯಲ್ಲಿ 80 ಜನ ದಲಿತ ಸಂಸದರಿದ್ದಾರೆ. ಸಂವಿಧಾನ ಸುಟ್ಟರೂ, ದಲಿತರ ಮೇಲೆ ಹಲ್ಲೆ ನಡೆದರೂ ತುಟಿ ಬಿಚ್ಚುತ್ತಿಲ್ಲ. ಬಾಬಾಸಾಹೇಬ ಅಂಬೇಡ್ಕರ್ ಹೇಳಿದಂತೆ ನಮಗೆ ಶೋಷಿತರು ಹಾಗೂ ದಲಿತರನ್ನು ಪ್ರತಿನಿಧಿಸುವವರು ಬೇಕಾಗಿದ್ದಾರೆ. ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಬೇಕಾಗಿಲ್ಲ. ಅಂತಹವರಿಗೆಬರುವ ಚುನಾವಣೆಯಲ್ಲಿ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.
‘ದೇಶದಲ್ಲಿ ಮನು ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ದೆಹಲಿಯಲ್ಲಿ 200 ಶಾಲೆಗಳನ್ನು ತೆರೆದಿರುವ ವ್ಯಕ್ತಿಗೆ ನಕ್ಸಲ ಎನ್ನುವ ಹಣೆಪಟ್ಟಿ ಕಟ್ಟಿ ಜೈಲಿಗೆ ತಳ್ಳಲಾಗಿದೆ. ಭೀಮಾ ಕೋರೆಗಾಂವ ಹೋರಾಟಗಾರರನ್ನು ನಕ್ಸಲರೆಂದು ಬಿಂಬಿಸಿ ದಲಿತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ದೇಶದಲ್ಲಿ ಶೇಕಡ 90 ರಷ್ಟು ರೈತರು ಹಾಗೂ ಕಾರ್ಮಿಕರೇ ಇದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುರುವವರು ಹಿಂದುಳಿದವರು,ದಲಿತರೇ ಆಗಿದ್ದಾರೆ. ಇವರೆಲ್ಲ ಹಿಂದೂಗಳೇ ಇದ್ದಾರೆ. ಇವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಏನು ಮಾಡಿದೆ. 60 ಕೋಟಿ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮೋದಿ ಅವರು ರೈತರ ಸಾಲ ಮನ್ನಾ ಮಾಡಲು ಸಿದ್ಧರಿಲ್ಲ. ಉದ್ಯಮಿಗಳ ₹ 5 ಲಕ್ಷ 39 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದು ಟೀಕಿಸಿದರು.
‘ಮೋದಿ ಹಿಂಸೆಯ ಸ್ಪೆಷಲಿಸ್ಟ್ ಆಗಿದ್ದಾರೆ. ದಲಿತರಿಗೆ ಹಿಂಸಾ ಮಾರ್ಗ ಅಗತ್ಯವಿಲ್ಲ. ಹೋರಾಟದ ಮಾರ್ಗದಲ್ಲಿ ಗುರಿ ತಲುಪಬೇಕು’ ಎಂದರು.
‘ಪುಣೆಯಲ್ಲಿ ಚರ್ಮ ಸುಲಿಯುವಂತೆ ದಲಿತರ ಮೇಲೆ ಹಲ್ಲೆ ನಡೆಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟ ನಂತರ ಅಹಮಬಾದ್ನಿಂದ ಪುಣೆಯ ವರೆಗೆ ರ್್ಯಾಲಿ ನಡೆಸಿದೆ. ಆಗ ಕರ್ನಾಟಕದವರು ಮಂಗಳೂರು ಚಲೋ ಹೋರಾಟ ನಡೆಸಿ ನನ್ನ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದರು. ಹೀಗಾಗಿ ಕರ್ನಾಟಕದೊಂದಿಗೆ ನನ್ನ ನಂಟು ಬೆಳೆದಿದೆ’ ಎಂದು ತಿಳಿಸಿದರು.
‘ಮನುವಾದಿಗಳಿಂದಾಗಿ ಗೌರಿ ಲಂಕೇಶ, ಎಂ.ಎಂ.ಕಲಬುರ್ಗಿ, ನರೇಂದ್ರ ದಾಬೋಲ್ಕರ್, ಪನ್ಸಾರೆ ಅವರನ್ನು ಕಳೆದುಕೊಂಡಿದ್ದೇವೆ. ನಮಗೆ ಪುಷ್ಪಕ ವಿಮಾನದ ಪಾಠ ಹೇಳುವವರು ಬೇಕಿಲ್ಲ. ವಿಮಾನ ಕಂಡು ಹಿಡಿದ ರೈಟ್ ಸಹೋದರರ ಪಾಠ ಅಗತ್ಯವಿದೆ. ಆನೆಯ ರುಂಡವನ್ನು ಮನುಷ್ಯನ ದೇಹಕ್ಕೆ ಜೋಡಿಸಿದ ಬಾಯೊಟೆಕ್ನಾಲಾಜಿ ಬೇಕಿಲ, 200 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗ ಕಸಿ ಮಾಡಿದ ಪಾಠ ಬೇಕಾಗಿದೆ’ ಎಂದು ಹೇಳಿದರು.
ಸೋಲಾಪುರದ ಪ್ರಗತಿಪರ ಚಿಂತಕ ದಶರಥ ಕಸಬೆ ಮಾತನಾಡಿ,‘ಸಂವಿಧಾನಕ್ಕೆ ಧಕ್ಕೆ ಉಂಟು ಮಾಡಿದರೆ ಭೀಮ ಸೇನೆ ಕೈಕಟ್ಟಿ ಕೂರುವುದಿಲ್ಲ. ಗಂಭೀರ ಪರಿಣಾಮ ಎದುರಿಸಲು ಸಿದ್ಧರಾಗಿರಬೇಕು’ ಎಂದು ಎಚ್ಚರಿಸಿದರು.
ಬೆಂಗಳೂರಿನ ಮೂವ್ಮೆಂಟ್ ಫಾರ್ ಜಸ್ಟಿಸ್್್ ಸಂಯೋಜಕ ಇರ್ಷಾದ್ ಅಹ್ಮದ್ ದೇಸಾಯಿ, ಸಂವಿಧಾನ ಉಳಿಸಿ ಆಂದೋಲನದ ಮುಖ್ಯ ಸಂಘಟಕ ಕೆ.ಎಸ್. ಅಶೋಕ, ರಾಜ್ಯ ಸಂಘಟಕಿ ಗೌರಿ ಪಾಲ್ಗೊಂಡಿದ್ದರು. ರಾಜರತನ್ ಸಿಂಧೆ ಅಧ್ಯಕ್ಷತೆ ವಹಿಸಿದ್ದರು.