ವಿಶ್ವ ಭ್ರಾತೃತ್ವವವನ್ನು ಸಾರುವ, ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಸಡಗರ,ಸಂಭ್ರಮದ ಪೂರ್ವ ತಯಾರಿಗಳು ತರಾತುರಿಯಲ್ಲಿ ನಡೆಯುತ್ತಿದೆ.
ಸಣ್ಣ ಮಕ್ಕಳಿಂದ ಹಿಡಿದು ಮುದಿ ಜೀವದವರೆಗಿನ ಪ್ರತಿಯೊಬ್ಬರು ಹಬ್ಬದ ಸಡಗರವನ್ನು ಎದುರು ನೋಡುತ್ತಿರುವಾಗ ಬಹುಷಃ ಕೆಲವು ಮನೆಗಳಲ್ಲಿನ ಅಡುಗೆ ಮನೆಗಳು ಸ್ತಬ್ಧವಾಗಿರಲೂಬಹುದು.
ಬಡತನದ ಕಾರಣಗಳಿಂದಲೋ,ಇನ್ನಿತರ ಯಾವುದೋ ಕಾರಣಗಳಿಂದಲೋ ಮನೆಯ ಬೆಳಕು ಆರಿರಲೂಬಹುದು.
ಒಂದು ಕಡೆ ಹಬ್ಬದ ಸಂಭ್ರಮ ಮನೆ ಮನಗಳಲ್ಲೂ ಕಲರವ ಸೃಷ್ಟಿಸುತ್ತಿರುವಾಗ ಅತ್ತ ಕೇರಳ ಹಾಗೂ ಕೊಡಗಿನ ಜನತೆಯು ಭೀಕರ ಮಳೆಯಿಂದ ತತ್ತರಿಸಿ ನಿರಾಶ್ರಿತ ಶಿಬಿರಗಳಲ್ಲಿ ಕಳೆಯುತ್ತಿರುವ ಅಸಂಖ್ಯಾತ ಜನರು ನಾಳೆಯ ಭರವಸೆಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ.
ಬಕ್ರೀದ್ ಹಬ್ಬದ ಒಂದು ದಿನದ ಸಡಗರ, ಸಂಭ್ರಮದ ಹೆಸರಿನಲ್ಲಿ ಶ್ರೀ ಮಂತಿಕೆಯ ಪೌರುಷದಿಂದ ಮೆರೆದಾಡುವಂತವರಾಗದಿರೋಣ.
ಹಬ್ಬದ ಸಡಗರ ನಮ್ಮೊಳಗೆ ಅದ್ಯಾವ ರೂಪದ ಸಂತೋಷವನ್ನು ಸೃಷ್ಟಿಸುತ್ತದೆಯೋ, ನಮ್ಮ ನೆರೆಯಲ್ಲಿರುವ ಅಥವಾ ಊರಿನಲ್ಲಿರುವ ಬಡವರ, ಅಸಹಾಯಕರ ಮನದಲ್ಲೂ ಸಂತೋಷವನ್ನು ಕಾಣುವಂತವರಾಗೋಣ. ನೆರೆ ಪೀಡಿತ ಜನತೆಯ ನೋವಿನಲ್ಲಿ ಭಾಗಿಯಾಗುವ ಮೂಲಕ ಅವರ ಮನದಲ್ಲೂ ಸಾಂತ್ವನದ ರರವಸೆಯನ್ನು ಮೂಡಿಸುವ ಪ್ರಯತ್ನ ನಡೆಸೋಣ.
ಹಬ್ಬದ ಸಂಭ್ರಮದ ಹೆಸರಿನಲ್ಲಿ ಅತಿರೇಕದಿಂದ ಹಬ್ಬದ ದಿನವನ್ನು ಮೋಜಿನ ದಿನವನ್ನಾಗಿ ಪರಿವರ್ತಿಸುವ ಯುವ ಮಿತ್ರರೇ..
ಒಂದು ದಿನದ ಸಂತೋಷದ ಹೆಸರಿನಲ್ಲಿ ಕುಟುಂಬದಲ್ಲಿ ಜೀವನ ಪರ್ಯಂತ ಸೂತಕದ ಛಾಯೆಯನ್ನು ಸೃಷ್ಟಿಯಾಗದಂತೆ ನೋಡಿಕೊಳ್ಳಿರಿ. ಬೈಕ್ ರೇಸ್, ವಾಹನಗಳ ಅಮಿತ ವೇಗ, ಸಮುದ್ರದಲ್ಲಿ ಮೋಜು,ಮುಂತಾದ ಅತಿರೇಕದ ವರ್ತನೆಗಳು ನಡೆಸುವಾಗ ನಿಮ್ಮ ಬರುವಿಕೆಯನ್ನು ಕಾಯುತ್ತಿರುವಂತಹ ಮನೆ ಮಂದಿಯನ್ನು ಹಾಗೂ ನಿಮ್ಮದೇ ಆಸರೆಯಲ್ಲಿ ಜೀವನ ನಡೆಸುವ ಸಹೋದರ,ಸಹೋದರಿಯರ ಕುರಿತು ಒಂದ್ನಿಮಿಷ ಚಿಂತಿಸಿ.
ತ್ಯಾಗದ ಸಂಕೇತವಾದ ಬಕ್ರೀದ್ ಹಬ್ಬವು ನಮ್ಮೊಳಗೂ ಕೆಡುಕನ್ನು ತ್ಯಜಿಸಿ, ಒಳಿತಿನೆಡೆಗೆ ಮುನ್ನುಗ್ಗುವಂತಹ ತ್ಯಾಗೋಜ್ಜಲವಾದ ಜೀವನವನ್ನು ನಡೆಸುವಂತಹ ಗುಣಗಳು ಬೆಳೆಯಲಿ. ಅನೈಕ್ಯ ,ಅಧರ್ಮವನ್ನು ತೊರೆದು ಜೀವಿಸುವಂತವರಾಗೋಣ.
ಸಮಾಜದ ನಡುವೆ ಶಾಂತಿ,ಸೌಹಾರ್ದತೆಯನ್ನು ಸಾರುತ್ತಾ ಬಕ್ರೀದ್ ಹಬ್ಬದ ಉದಾತ್ತ ಸಂದೇಶವನ್ನು ಪಸರಿಸೋಣ.
ಹಬ್ಬದ ಸಂದೇಶದೊಂದಿಗೆ ಸಹೋದರ ಧರ್ಮೀಯರ ಭಾವನೆಗಳಿಗೆ ಘಾಸಿಗೊಳಿಸುವಂತಹ ಬರಹ, ವರ್ತನೆಗಳನ್ನು ಸಾಮಾಜಿಕ ತಾಣಗಳಲ್ಲಿ ಬಿತ್ತರಿಸುವ,ಸಮಾಜದ ಅರಾಜಕತೆಗೆ ಮುನ್ನುಡಿಯಿಡುವಂತಹ ಘಟನೆಗಳು ನಮ್ಮಿಂದ ನಡೆಯದಂತೆ ಜಾಗರೂಕರಾಗಿರೋಣ.
ಹಬ್ಬದ ಸಂಭ್ರಮ ನಮ್ಮ ಅತಿರೇಕಗಳಿಗೆ ಇರುವ ಸರ್ಟಿಫಿಕೇಟ್ ಅಂತು ಖಂಡಿತ ಅಲ್ಲ. ಒಂದು ದಿನದ ಸಂಭ್ರಮದ ಹೆಸರಿನಲ್ಲಿ ಅಧಾರ್ಮಿಕತೆಯಿಂದ ಮೆರೆದು ಜೀವನ ಪರ್ಯಂತ ಕಷ್ಟ ಪಡುವ ಪ್ರವೃತ್ತಿಗಳು ನಡೆಯದೆ ನಾಡಿನೆಲ್ಲೆಡೆ ಶಾಂತಿ,ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸುವಂತವರಾಗಿ .
ಸರ್ವ ಧರ್ಮೀಯರಿಗೂ ತ್ಯಾಗ, ಬಲಿದಾನ, ವಿಶ್ವ ಭ್ರಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬದ ಪ್ರೀತಿ ತುಂಬಿದ ಶುಭಾಶಯಗಳು.
ಸ್ನೇಹಜೀವಿ ಅಡ್ಕ